ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಬಯೋಮೆಟ್ರಿಕ್‌ ಹಾಜರಾತಿ ಖಚಿತಪಡಿಸಿಕೊಳ್ಳಿ: ಕೇಂದ್ರ ಸೂಚನೆ

Published 23 ಜೂನ್ 2023, 15:02 IST
Last Updated 23 ಜೂನ್ 2023, 15:02 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕರರು ಆಧಾರ್‌ ಆಧರಿತ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ವ್ಯವಸ್ಥೆಯ ಮೂಲಕ ಹಾಜರಾತಿ ನಮೂದಿಸುತ್ತಾರೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ಶುಕ್ರವಾರ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ನೌಕರರು ಈ ವ್ಯವಸ್ಥೆಯ ಮೂಲಕ ಹಾಜರಾತಿ ನಮೂದಿಸುತ್ತಿಲ್ಲ ಎಂಬ ಅಂಶವು ಎಇಬಿಎಎಸ್‌ ಕುರಿತು ಈಚೆಗೆ ನಡೆಸಿದ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ ಎಂದು ಸಿಬ್ಬಂದಿ ಸಚಿವಾಲಯ ಆದೇಶದಲ್ಲಿ ಹೇಳಿದೆ.

ಎಲ್ಲಾ ನೌಕರರು ತಮ್ಮ ಹಾಜರಾತಿಯನ್ನು ಎಇಬಿಎಎಸ್‌ ಮೂಲಕವೇ ನಮೂದಿಸಬೇಕು ಎಂದೂ ತಿಳಿಸಿದೆ.

ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮಲ್ಲಿನ ಬಯೋಮೆಟ್ರಿಕ್‌ ಉಪಕರಣಗಳು ಎಲ್ಲಾ ಸಮಯದಲ್ಲೂ ಕಾರ್ಯನಿರ್ಹಿಸುತ್ತಿವೆಯೇ ಎಂಬುದನ್ನೂ ಖಾತರಿಪಡಿಸಿಕೊಳ್ಳಬೇಕು ಎಂದೂ ಸೂಚಿಸಿದೆ.

ವಿಭಾಗದ ಮುಖ್ಯಸ್ಥರುಗಳು ತಮ್ಮ ಅಧೀನದಲ್ಲಿರುವ ನೌಕರರು ಸಮಯಪಾಲನೆ ಮಾಡುತ್ತಾರೋ ಮತ್ತು ಎಇಬಿಎಎಸ್‌ ಮೂಲಕ ಹಾಜರಾತಿಯನ್ನು ನಮೂದಿಸುತ್ತಾರೊ ಎಂಬುದನ್ನು ಗಮನಿಸುತ್ತಿರಬೇಕು ಎಂದಿದೆ.

ನೌಕರರು ಕಚೇರಿಗೆ ತಡವಾಗಿ ಬರುವುದು ಮತ್ತು ಬೇಗನೇ ತೆರಳುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದೆ.

ಅಂಗವಿಕಲ ನೌಕರರಿಗೆ ಬಯೋಮೆಟ್ರಿಕ್‌ ಉಪಕರಣಗಳನ್ನು ಬಳಸಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಅಂತಹ ನೌಕರರ ಡೆಸ್ಕ್‌ ಬಳಿ ಅಥವಾ ಅವರಿಗೆ ಕೈಗೆಟಕುವ ಎತ್ತರದಲ್ಲಿ ಉಪಕರಣಗಳನ್ನು ಅಳವಡಿಸಬೇಕು ಮತ್ತು ಫೇಶಿಯಲ್‌ ರೆಕಗ್ನಿಷನ್‌ ಮೂಲಕ ಬಯೋಮೆಟ್ರಿಕ್‌ ಹಾಜರಾತಿ ನಮೂದಿಸುವ ವ್ಯವಸ್ಥೆಯನ್ನೂ ಮಾಡಬೇಕು ಎಂದೂ ಆದೇಶದಲ್ಲಿ ವಿವರಿಸಿದೆ.

ಕೋವಿಡ್‌ –19ರ ಬಳಿಕ ಎಇಬಿಎಎಸ್‌ ಮೂಲಕ ಹಾಜರಾತಿ ನಮೂದಿಸುವುದನ್ನು ಕೆಲಕಾಲ ನಿಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT