ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ಸಿಬ್ಬಂದಿ ಸುರಕ್ಷೆ: ಕೇಂದ್ರದಿಂದ ರಾಜ್ಯಗಳಿಗೆ ಕೆಲವು ಮಹತ್ವದ ಸಲಹೆ

Published 28 ಆಗಸ್ಟ್ 2024, 14:25 IST
Last Updated 28 ಆಗಸ್ಟ್ 2024, 14:25 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯಸೇವೆ ಒದಗಿಸುವ ವೃತ್ತಿನಿರತರ ಸುರಕ್ಷೆಗಾಗಿ ಆಸ್ಪತ್ರೆ ಆವರಣಗಳಲ್ಲಿ ರಾತ್ರಿ ಹೊತ್ತು ಪಾಳಿಯಲ್ಲಿ ಗಸ್ತು ತಿರುಗಬೇಕು ಮತ್ತು ಪ್ರಮುಖ ಸ್ಥಳಗಳಿಗೆ ಜನರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ, ವೈದ್ಯ ಸಿಬ್ಬಂದಿ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸಲಹೆಗಳನ್ನು ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯು, ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ಜೊತೆ ಮಾತುಕತೆ ನಡೆಸಬೇಕು. ಈ ಪ್ರಕ್ರಿಯೆಯು ಒಂದು ವಾರದಲ್ಲಿ ಪೂರ್ಣಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ವೈದ್ಯ ಸಿಬ್ಬಂದಿ ಸುರಕ್ಷೆಗೆ ಕೈಗೊಳ್ಳಬಹುದಾದ ಅಗತ್ಯ ತುರ್ತು ಕ್ರಮಗಳ ಬಗ್ಗೆ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಕೇಂದ್ರದ ಇತರ ಸಲಹೆಗಳು

* ವೈದ್ಯ ಸಿಬ್ಬಂದಿ ಸುರಕ್ಷೆ ಕುರಿತ ರಾಜ್ಯದ ಕಾನೂನುಗಳು ಹಾಗೂ ಕಾನೂನು ಉಲ್ಲಂಘನೆಗೆ ಇರುವ ಶಿಕ್ಷೆ ಮತ್ತು ದಂಡದ ಕುರಿತ ವಿವರವನ್ನು ಆಸ್ಪತ್ರೆಯ ಆವರಣದಲ್ಲಿ ಎದ್ದು ಕಾಣುವಂತೆ ಇಂಗ್ಲಿಷ್‌ ಮತ್ತು ಸ್ಥಳೀಯ ಭಾಷೆಗಳಲ್ಲಿ ಪ್ರದರ್ಶಿಸಬೇಕು

*ಹಿರಿಯ ವೈದ್ಯರು, ಆಡಳಿತಾಧಿಕಾರಿಗಳನ್ನು ಒಳಗೊಂಡ ಆಸ್ಪತ್ರೆ ಸುರಕ್ಷತೆ ಸಮಿತಿ ಮತ್ತು ಹಿಂಸಾಚಾರ ತಡೆ ಸಮಿತಿ ರಚಿಸಬೇಕು

*ಜನರು ಮತ್ತು ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯ ಪ್ರಮುಖ ಸ್ಥಳಗಳಿಗೆ ಪ್ರವೇಶ ಕಲ್ಪಿಸಬೇಕು

* ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ನರ್ಸ್‌ಗಳ ಸುರಕ್ಷೆ ದೃಷ್ಟಿಯಿಂದ ಆಸ್ಪತ್ರೆಯ ಎಲ್ಲ ಪ್ರದೇಶಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು

*ಆಸ್ಪತ್ರೆಯಲ್ಲಿ 24/7 ಭದ್ರತಾ ಕಂಟ್ರೋಲ್ ರೂಮ್‌ ಸ್ಥಾಪಿಸಬೇಕು

* ಲೈಂಗಿಕ ಕಿರುಕುಳ ಕುರಿತ ಆಂತರಿಕ ಸಮಿತಿ ರಚಿಸಬೇಕು

* ಸಿ.ಸಿ.ಟಿ.ವಿ ಕ್ಯಾಮೆರಾಗಳ ಸ್ಥಿತಿಗತಿಯ ಪರಿಶೀಲನೆ ನಡೆಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT