ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆಯಲ್ಲೇ ಕಳೆದ 11 ಆಫ್ರಿಕಾ ಚೀತಾಗಳು

Published 26 ಏಪ್ರಿಲ್ 2023, 21:17 IST
Last Updated 26 ಏಪ್ರಿಲ್ 2023, 21:17 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾದ 11 ಚೀತಾಗಳು ಅರಣ್ಯದ ಕಿರಿದಾದ ಆವರಣದಲ್ಲಿ ಕೂಡಿಹಾಕಿದ ಸ್ಥಿತಿಯಲ್ಲೇ 11 ತಿಂಗಳ ಅವಧಿಯನ್ನು ಕಳೆದಿವೆ. ಇದರಿಂದ ಈ ಚೀತಾಗಳನ್ನು ಕಾಡಿಗೆ ಬಿಡುವ ಮೊದಲು ಅವುಗಳ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಬಗ್ಗೆ ತಜ್ಞರು ಕಳವಳಪಡುವಂತೆ ಮಾಡಿದೆ.    

‘ಮೊದಲು ದಕ್ಷಿಣ ಆಫ್ರಿಕಾದಲ್ಲಿ ಮತ್ತು ನಂತರ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ 50x50 ಮೀಟರ್‌ ವಿಸ್ತೀರ್ಣದ ಆವರಣಗಳಲ್ಲಿ ಈ ಚೀತಾಗಳನ್ನು ಇರಿಸಲಾಗಿತ್ತು. ಕಳೆದ ವಾರವಷ್ಟೇ ಇವುಗಳನ್ನು 5 ಹೆಕ್ಟೇರ್‌ನಷ್ಟು ವಿಸ್ತಾರದ ಪ್ರದೇಶಕ್ಕೆ ಬಿಡಲಾಗಿತ್ತು. ಅಲ್ಲಿ ಅವುಗಳಿಗೆ ಓಡಾಡಲು ಕನಿಷ್ಠ ಅವಕಾಶವಿದೆ. ಇಷ್ಟು ಕಿರಿದಾದ ಪ್ರದೇಶವು ಅವುಗಳಿಗೆ ತಮ್ಮ ದೈಹಿಕ ಸಾಮರ್ಥ್ಯ  ಕಾಪಾಡಿಕೊಳ್ಳಲು ಸಾಕಾಗುವುದಿಲ್ಲ’ ಎಂದು ಚೀತಾ ಸಂತತಿ ಪುನರುತ್ಥಾನ ಯೋಜನೆ ವ್ಯವಸ್ಥಾಪಕ ಮತ್ತು ಚೀತಾ ಸಂರಕ್ಷಕ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಜೆಕ್ಟ್ ಚೀತಾಗೆ ಸಂಬಂಧಿಸಿದ ಮೆರ್ವೆ ಮತ್ತು ಇತರ ತಜ್ಞರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಮಧ್ಯಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಈ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. 

‘ಚೀತಾಗಳನ್ನು ಸಂಬಂಧಿಸಿದವರು ಕಣ್ಗಾವಲಿನಲ್ಲಿ ಪ್ರತ್ಯೇಕವಾಗಿ ಯಾಕೆ ದೀರ್ಘಕಾಲ ಇರಿಸಿದ್ದರೆನ್ನುವುದು ನಮಗೆ ತಿಳಿಯದು. ಇದು ಚೀತಾಗಳ ಯಶಸ್ವಿ ಪುನರುತ್ಥಾನ ಕಾರ್ಯದೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ. ಅತಿ ಮುನ್ನೆಚ್ಚರಿಕೆಯ ವಿಧಾನ ಅನುಸರಿಸುತ್ತಿರುವುದು ಕೂಡ ಚೀತಾಗಳಿಗೆ ಹಾನಿಕಾರಕವಾಗಬಲ್ಲದು’ ಎಂದು ಮೆರ್ವೆ ಹೇಳಿದರು.

ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳಲ್ಲಿ ಉದಯ್‌ ಹೆಸರಿನ ಚೀತಾ ಸಾವಿನ ಮೊದಲ ಪ್ರಕರಣದಲ್ಲಿ ವಿಷಪ್ರಾಶನದ ಸಾಧ್ಯತೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಆದರೆ, ಇನ್ನೊಬ್ಬ ತಜ್ಞರು, ಚೀತಾ ಸಾವಿಗೆ ವಿಷಾಹಾರ ಸೇವನೆಯೇ ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಚೀತಾಗಳನ್ನು ಅರಣ್ಯಕ್ಕೆ ಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಗುರುವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT