ಹಾಥರಸ್: ಶಾಲೆಯ ಏಳಿಗೆಗಾಗಿ ವಿದ್ಯಾರ್ಥಿಯನ್ನು ಬಲಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗವು ಹಾಥರಸ್‌ಗೆ ಶನಿವಾರ ಭೇಟಿ ನೀಡಿದೆ.
ದೇವೇಂದ್ರ ಶರ್ಮಾ ಅವರನ್ನೊಳಗೊಂಡ ತಂಡ, ಶಾಲೆ ಹಾಗೂ ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಸ್ಥಳೀಯ ಪೊಲೀಸರು, ಆಡಳಿತಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಸಹ ಅವರೊಂದಿಗೆ ಇದ್ದರು.
ತುರ್ಸೆನ್ ಗ್ರಾಮದಲ್ಲಿರುವ ವಿದ್ಯಾರ್ಥಿಯ ಕುಟುಂಬದವರನ್ನು ಭೇಟಿಯಾದ ಆಯೋಗ, ಸೂಕ್ತ ತನಿಖೆಯ ಭರವಸೆ ನೀಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಶರ್ಮಾ, ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ. ಶಾಲೆಗೆ ಬೀಗ ಜಡಿಯಲಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ ಹಾಗೂ ಇಬ್ಬರು ಶಿಕ್ಷಕರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ವಿದ್ಯಾರ್ಥಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.