ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ವಾದ, ವಿವಾದ ಪ್ರಜಾಪ್ರಭುತ್ವದ ಲಕ್ಷಣ: ಎಚ್‌ಡಿಕೆ, ಸಿದ್ದರಾಮಯ್ಯ

Last Updated 19 ಡಿಸೆಂಬರ್ 2019, 14:08 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ನಿಯಂತ್ರಿಸಲು ರಾಜ್ಯದಲ್ಲಿ ನಿಷೇಧಾಜ್ಞೆ, ಪೊಲೀಸ್‌ ಬಲ ಪ್ರಯೋಗ ಮಾಡಿರುವ ಸರ್ಕಾರದ ನಡೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಕಟುವಾಗಿ ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

ವಾದ, ವಿವಾದ, ಸಂವಾದ, ಪ್ರತಿಭಟನೆ, ಚಳವಳಿಗಳು ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ. ಅದನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಎಚ್‌.ಡಿ ಕುಮಾರಸ್ವಾಮಿ ಟ್ವೀಟ್‌

ವಾದ, ವಿವಾದ, ಸಂವಾದ ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ. ಹೀಗಾಗಿಯೇ ಪ್ರತಿಭಟಿಸುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಭಾರತದಲ್ಲಿ ಸಾಂವಿಧಾನಿಕ ಹಕ್ಕು. ಆದರೆ ನಿಷೇಧಾಜ್ಞೆ, ಲಾಠಿ ಚಾರ್ಜ್‌, ಬಂಧನಗಳ ಮೂಲಕ ಬಿಜೆಪಿ ಸರ್ಕಾರ ಸಂವಿಧಾನವೇ ನೀಡಿರುವ ಹಕ್ಕುಗಳನ್ನು ಹತ್ತಿಕ್ಕುತ್ತಿದೆ.

ಸಂವಿಧಾನವನ್ನೇ ಬದಲಿಸಲು ಹೊರಟ ಬಿಜೆಪಿ ಸಂವಿಧಾನದ ಹಕ್ಕುಗಳನ್ನು ಗೌರವಿಸುವುದಿಲ್ಲ ಎಂಬುದು ನಿರೀಕ್ಷಿತವೇ. ಆದರೂ, ಪ್ರಜಾಪ್ರಭುತ್ವ ತೋರಿದ ಹಾದಿಯನ್ನು(ಬೇರೆ ವಿಧಾನ)ಬಳಸಿಕೊಂಡು ರಚನೆಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜೆಗಳ ಪ್ರತಿಭಟನೆಗೆ ಗೌರವ ಕೊಡಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಬೇಕು.

ಸಿದ್ದರಾಮಯ್ಯ ಟ್ವೀಟ್‌

ನಮ್ಮಜನ ಶಾಂತಿಪ್ರಿಯರು, ನ್ಯಾಯಾಲಯದ ಬಗ್ಗೆ ಗೌರವ, ಕಾನೂನಿನ ಬಗ್ಗೆ ನಿಷ್ಠೆ ಉಳ್ಳವರು. ಒಡೆಯುವವರು, ಬೆಂಕಿಹಚ್ಚುವವರು ನಿಮ್ಮ ಪಕ್ಷದಲ್ಲಿ ಹೆಚ್ಚಿದ್ದಾರೆ. ಯಡಿಯೂರಪ್ಪ ಅವರೇ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ನಿಷೇಧಾಜ್ಞೆ ಹೇರಿ ನೀವು ಕನ್ನಡಿಗರನ್ನು ಅವಮಾನಿಸಿದ್ದೀರಿ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ನಿಮ್ಮ ಪಕ್ಷಕ್ಕೆ ದೇಶದಲ್ಲಿ ನಡೆದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿರಲಾರದು. ಗಾಂಧಿ, ನೆಹರೂ ಮತ್ತು ಪಟೇಲ್ ಸೇರಿದಂತೆ ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ಹೋರಾಟದ ಪರಂಪರೆಗೆ ತಡೆಯೊಡ್ಡಬೇಡಿ.

ಪ್ರತಿಭಟನೆ, ಪ್ರತಿರೋಧ, ಚಳುವಳಿಗಳೆಲ್ಲ ಆರೋಗ್ಯಪೂರ್ಣ ಪ್ರಜಾಪ್ರಭುತ್ವದ ಲಕ್ಷಣಗಳು. ಭಿನ್ನಮತದ ಅಭಿವ್ಯಕ್ತಿಯ ಕೊರಳು ಹಿಚುಕಲು ಹೊರಡುವುದು ಸರ್ವಾಧಿಕಾರಿ ಧೋರಣೆ. ಇದು ಹಿಟ್ಲರನ ಜರ್ಮನಿ ಅಲ್ಲ, ಗಾಂಧೀಜಿವಯರ ಭಾರತ. ಯಡಿಯೂರಪ್ಪನವರೇ ನೀವು ಪಕ್ಷದ ಗುಲಾಮರಾಗಬೇಡಿ, ಆತ್ಮಸಾಕ್ಷಿಗೆ ಕಿವಿಕೊಡಿ.

ನಿಮ್ಮ ಪೌರತ್ವ ತಿದ್ದುಪಡಿ ಕಾಯ್ದೆಯ ಜನಹಿತದ ಬಗ್ಗೆ ಅಷ್ಟೊಂದು ಭರವಸೆ ಇದ್ದಿದ್ದರೆ ಪ್ರತಿಭಟನೆಗೆ ಯಾಕೆ ಹೆದರುತ್ತಿದ್ದೀರಿ, ನರೇಂದ್ರ ಮೋದಿ ಅವರೇ ಜನಾಭಿಪ್ರಾಯ ಆಲಿಸಿ, ಅವರಿಗೆ ಮನವರಿಕೆ ಮಾಡಿಕೊಡಿ. ದಂಡಪ್ರಯೋಗ ಮನುಷ್ಯನ ದೌರ್ಬಲ್ಯ. ನಿಮ್ಮ ವರ್ತನೆಯೇ ನಿಮ್ಮ ದುಷ್ಟ ಆಲೋಚನೆಗೆ ಸಾಕ್ಷಿ.

ಕಾರ್ಯಾಂಗದ ಮುಖ್ಯ ಭಾಗವಾಗಿರುವ ಪೊಲೀಸರೇ, ನೀವು ಸರ್ಕಾರಿ ನೌಕರರಾಗಿದ್ದರೂ ಮೊದಲು ಮನುಷ್ಯರು. ಕರ್ನಾಟಕದ ಪೊಲೀಸರಿಗೆ ಅವರದ್ದೇ ಆಗಿರುವ ಹಿರಿಮೆ-ಗರಿಮೆಗಳಿವೆ. ನಿಮಗೆ ದೆಹಲಿ ಪೊಲೀಸರು ಆದರ್ಶವಾಗುವುದು ಬೇಡ, ಅವರ ಸ್ಪೂರ್ತಿಯಿಂದ ಕೆಲಸ ಮಾಡಿದರೆ ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸಲಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT