ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಮೂರ್ತಿಗಳು ದೇವರಲ್ಲ; ಜನಸೇವಕರು: ಸಿಜೆಐ ಚಂದ್ರಚೂಡ್ ಪ್ರತಿಪಾದನೆ

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಪಶ್ಚಿಮ ವಲಯದ ಕಾರ್ಯಕ್ರಮ
Published 29 ಜೂನ್ 2024, 13:18 IST
Last Updated 29 ಜೂನ್ 2024, 13:18 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ‘ಸಾಂವಿಧಾನಿಕ ನೈತಿಕತೆ’ಯ ಅನುಷ್ಠಾನದ ಅಗತ್ಯವನ್ನು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ನ್ಯಾಯಾಲಯಗಳು ವೈವಿಧ್ಯ, ಒಳಗೊಳ್ಳುವಿಕೆ ಮತ್ತು ಸಹಿಷ್ಣುತೆಗೆ ಬದ್ಧರಾಗಿರಬೇಕು’ ಎಂದು ಹೇಳಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಪಶ್ಚಿಮ ವಲಯದ 2ನೇ ಪ್ರಾದೇಶಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಪ್ರಾಮುಖ್ಯ ಕುರಿತು ಗಮನಸೆಳೆದರು.

‘ಸಾಂವಿಧಾನಿಕ ನೈತಿಕತೆ’ಯ ಅರ್ಥವಿವರಣೆ ನೀಡಿದ ಅವರು, ‘ಸಂವಿಧಾನದ ಪೀಠಿಕೆ ಮೌಲ್ಯಗಳನ್ನು ಆಧರಿಸಿರಬೇಕು. ಒಕ್ಕೂಟ ವ್ಯವಸ್ಥೆಯು ವಿವಿಧತೆಯನ್ನು ಒಳಗೊಂಡಿದೆ. ದೇಶದ ವೈವಿಧ್ಯ ಸಂರಕ್ಷಿಸುವಲ್ಲಿ ನ್ಯಾಯಮೂರ್ತಿಗಳ ಪಾತ್ರ ಪ್ರಮುಖವಾದುದು’ ಎಂದು ಅಭಿಪ್ರಾಯಪಟ್ಟರು.

‘ಜನರು ಕೋರ್ಟ್‌ಗಳನ್ನು ನ್ಯಾಯದೇಗುಲ ಎಂದು ಗುರುತಿಸುವಾಗ ನಾನು ಮೌನವಾಗುತ್ತೇನೆ. ನ್ಯಾಯದೇಗುಲ ಎಂದುಬಿಟ್ಟರೆ, ನ್ಯಾಯಮೂರ್ತಿಗಳು ದೇವರಾಗಿಬಿಡುತ್ತಾರೆ. ಆದರೆ, ವಾಸ್ತವವಾಗಿ ಅವರು ದೇವರಲ್ಲ; ಜನರ ಸೇವಕರು. ಯೋಚನೆ ಮಾಡಿ, ಅನುಕಂಪದಿಂದ ಜನರಿಗೆ ನ್ಯಾಯ ನೀಡುವವರು’ ಎಂದು ಸಿಜೆಐ ವ್ಯಾಖ್ಯಾನಿಸಿದರು.  

‘ವ್ಯಕ್ತಿಗತ ಚಿಂತನೆಗಳಲ್ಲಿನ ಲೋಪ ಮತ್ತು ನ್ಯಾಯಮೂರ್ತಿಗಳ ನಂಬಿಕೆಗಳ ಹಸ್ತಕ್ಷೇಪವು ತೀರ್ಪಿನ ಮೇಲೆ ಉಂಟಾಗುವುದು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದೂ ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆ (ಎಐ) ಬೆಂಬಲಿತ ತಂತ್ರಜ್ಞಾನದ ನೆರವು ಪಡೆದು, ಸ್ವಾತಂತ್ರ್ಯಾ ನಂತರ ನೀಡಲಾದ 37 ಸಾವಿಕ್ಕೂ ಅಧಿಕ ತೀರ್ಪುಗಳನ್ನು ಇಂಗ್ಲಿಷ್‌ನಿಂದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಿಜೆಐ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT