ರಾಜ್ಯದ ಪಶ್ಚಿಮ ಮೆದಿನಿಪುರ ಜಿಲ್ಲೆಯ ಪಾಶ್ಕುರಾದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ಮಾತನಾಡಿದರು.
‘ಈ ಮಾನವ ನಿರ್ಮಿತ ಪ್ರವಾಹಕ್ಕೆ ದಾಮೋದರ ವ್ಯಾಲಿ ಕಾರ್ಪೋರೇಶನ್ (ಡಿವಿಸಿ) ಹೊಣೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಿಸುವ ಪಿತೂರಿ ನಡೆಸಲಾಗಿದೆ’ ಎಂದು ಕಿಡಿಕಾರಿದ್ದಾರೆ.
‘ಇದು ಮಳೆ ನೀರಲ್ಲ, ಇದು ಕೇಂದ್ರ ಸರ್ಕಾರದ ಸಂಸ್ಥೆ ಡಿವಿಸಿ ತನ್ನ ಅಣೆಕಟ್ಟುಗಳಿಂದ ಬಿಡುಗಡೆಗೊಳಿಸಿರುವ ನೀರು. ಇದು ಮಾನವ ನಿರ್ಮಿತ ಪ್ರವಾಹವಾಗಿದ್ದು, ದುರದೃಷ್ಟಕರವಾಗಿದೆ. ನೀರಿನ ಸಂಗ್ರಹಣಾ ಸಾಮರ್ಥ್ಯ ಶೇ 36ರಷ್ಟು ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಏಕೆ ಡಿವಿಸಿ ಅಣೆಕಟ್ಟುಗಳ ಹೂಳು ತೆಗೆಸುತ್ತಿಲ್ಲ?, ಇದರ ಹಿಂದೆ ದೊಡ್ಡ ಪಿತೂರಿ ನಡೆಸಲಾಗಿದೆ. ಇದು ಮುಂದುವರಿಯುವುದಿಲ್ಲ. ಇದರ ವಿರುದ್ಧ ನಾವು ದೊಡ್ಡ ಚಳವಳಿಯನ್ನು ಪ್ರಾರಂಭಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ 5.5 ಲಕ್ಷ ಕ್ಯೂಸೆಕ್ ನೀರನ್ನು ಡಿವಿಸಿ ಬಿಡುಗಡೆಗೊಳಿಸಿದೆ. ಹೀಗಾಗಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎಲ್ಲರಿಗೂ ಅರ್ಹ ಪರಿಹಾರ ಉಪಕರಣ ಸಿಗುವಂತಾಗಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಅವರು ತಿಳಿಸಿದ್ದಾರೆ.
ಬುಧವಾರದಿಂದ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರವಾಸ ಕೈಗೊಂಡಿದ್ದಾರೆ.