ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು-ಕಾಶ್ಮೀರ | ಕಾರಾಗೃಹದಲ್ಲಿ ಕೈದಿಗಳಿಗೆ ಕಂಪ್ಯೂಟರ್‌ ಕಲಿಕೆ

Published 29 ಏಪ್ರಿಲ್ 2023, 7:05 IST
Last Updated 29 ಏಪ್ರಿಲ್ 2023, 7:05 IST
ಅಕ್ಷರ ಗಾತ್ರ

ಭದೇರ್ವಾ : ಜೈಲಿನಿಂದ ಬಿಡುಗಡೆಯಾದ ನಂತರ ಕೈದಿಗಳಿಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ನೆರವಾಗುವಂತೆ ಜಮ್ಮು–ಕಾಶ್ಮೀರದ ಭದೇರ್ವಾ ಜೈಲಿನಲ್ಲಿರುವ ಕೈದಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲು ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಭದೇರ್ವಾ ಜೈಲಿನಲ್ಲಿ ಒಟ್ಟು 85 ಕೈದಿಗಳಿದ್ದಾರೆ. ಅವರಲ್ಲಿ 24 ಜನರನ್ನು ಮೊದಲ ಬ್ಯಾಚ್‌ಗೆ ಆಯ್ಕೆ ಮಾಡಲಾಗಿದೆ. ಉಳಿದ 61 ಕೈದಿಗಳಿಗೆ ವಯಸ್ಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

‘ಭದೇರ್ವಾ ಕ್ಯಾಂಪಸ್ ವಿಶ್ವವಿದ್ಯಾಲಯ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕಂಪ್ಯೂಟರ್ ಶಿಕ್ಷಣದಲ್ಲಿ ಕೈದಿಗಳನ್ನು ನಿಪುಣರನ್ನಾಗಿ ಮಾಡಲು ಕಂಪ್ಯೂಟರ್ ತರಗತಿಗಳನ್ನು ಪ್ರಾರಂಭಿಸಿದ್ದೇವೆ‘ ಎಂದು ಭದೇರ್ವಾ ಜಿಲ್ಲಾ ಜೈಲು ಅಧೀಕ್ಷಕ ಮುಷ್ತಾಕ್ ಮಲ್ಲಾ ಹೇಳಿದರು.

‘24 ವಿದ್ಯಾವಂತ ಕೈದಿಗಳನ್ನು ಮೊದಲ ಬ್ಯಾಚ್‌ನಲ್ಲಿ ಆಯ್ಕೆ ಮಾಡಿದ್ದು, ಅವರಿಗೆ ತರಗತಿಗಳು ನಡೆಯುತ್ತಿವೆ. ಉಳಿದ 61 ಕೈದಿಗಳನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ವಯಸ್ಕರ ಶಿಕ್ಷಣ ಕಾರ್ಯಕ್ರಮದ  ತರಗತಿಗೆ ದಾಖಲಿಸಲಾಗಿದೆ‘ ಎಂದರು.

‘ಕೈದಿಗಳಿಗೆ ಕಂ‍ಪ್ಯೂಟರ್‌ ತರಬೇತಿಯನ್ನು ಆರು ತಿಂಗಳವರೆಗೆ ನೀಡಲಾಗುತ್ತದೆ . ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಭದೇರ್ವಾ ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಶಿಕ್ಷಕರು ಮತ್ತು ವಿದ್ವಾಂಸರು ಕೈದಿಗಳಿಗೆ ಕಂಪ್ಯೂಟರ್ ಕಲಿಸುತ್ತಾರೆ‘ ಎಂದು ಭದೇರ್ವಾ ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಜತೀಂದರ್ ಮನ್ಹಾಸ್ ಹೇಳಿದರು.

ಭಾರತದಲ್ಲಿ 4,78,600 ಅಪರಾಧಿಗಳಲ್ಲಿ ಶೇಕಡ 41.6ರಷ್ಟು ಕೈದಿಗಳು 10ನೇ ತರಗತಿಗಿಂತ ಕಡಿಮೆ ಸಾಕ್ಷರತೆಯನ್ನು ಹೊಂದಿದ್ದಾರೆ. ಶೇಕಡ  27.7 ಕೈದಿಗಳು ಅನಕ್ಷರಸ್ಥರು ಎಂದು 2019ರ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ ಅಂಶಗಳು ವರದಿ ಮಾಡಿವೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಅನೇಕ ಜೈಲುಗಳು ಕೈದಿಗಳನ್ನು ಸಾಕ್ಷರತೆಯೆಡೆಗೆ ಕೊಂಡೊಯ್ಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT