ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ವಾಗ್ದಾಳಿಗೆ ಜಾತಿ ಗಣತಿಯೇ ಅಸ್ತ್ರ

ಕರ್ಪೂರಿ ಠಾಕೂರ್‌ಗೆ ‘ಭಾರತ ರತ್ನ’ ಸ್ವಾಗತಿಸಿದರೂ ಕೇಂದ್ರದ ವಿರುದ್ಧ ‘ಇಂಡಿಯಾ’ ಟೀಕಾಪ್ರಹಾರ
Published 24 ಜನವರಿ 2024, 14:30 IST
Last Updated 24 ಜನವರಿ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ ಕರ್ಪೂರಿ ಠಾಕೂರ್‌ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದು ಹಾಗೂ ಸದ್ಯ, ದೇಶದಾದ್ಯಂತ ಜಾತಿಗಣತಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗದಿರುವುದನ್ನು ಮುಂದಿಟ್ಟುಕೊಂಡು ‘ಇಂಡಿಯಾ’ ಅಂಗಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

‘ಕರ್ಪೂರಿ ಠಾಕೂರ್‌ ಅವರಿಗೆ ಬಹು ದಿನಗಳ ಹಿಂದೆಯೇ ಅತ್ಯುನ್ನತ ನಾಗರಿಕ ಪುರಸ್ಕಾರ ಲಭಿಸಬೇಕಿತ್ತು. ಇದು ಸಮಾಜವಾದ ಚಿಂತನೆಯ ಎಲ್ಲ ಪಕ್ಷಗಳ ಬೇಡಿಕೆಯೂ ಆಗಿತ್ತು. ಪ್ರಶಸ್ತಿಯನ್ನು ಈಗ ಘೋಷಿಸಿರುವುದು ಸ್ವಾಗತಾರ್ಹ’ ಎಂದು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರಿಂದ ಹಿಡಿದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ವರೆಗೆ ವಿಪಕ್ಷಗಳ ನಾಯಕರು ಹೇಳಿದ್ದಾರೆ. ಆದರೆ, ‘ದೇಶದಲ್ಲಿ ಈಗ ಜಾತಿಗಣತಿ ಅಗತ್ಯವಿದೆ. ದೇಶದ ಬಡವರಿಗೆ ತೋರಿಕೆಯ ಬದಲಾಗಿ ನಿಜವಾದ ನ್ಯಾಯ ಒದಗಿಸುವುದು ಈಗಿನ ತುರ್ತು’ ಎಂದು ವಿಪಕ್ಷಗಳ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಕರ್ಪೂರಿ ಠಾಕೂರ್‌ ಅವರ ಜನ್ಮ ಶತಮಾನೋತ್ಸವಕ್ಕೂ ಮುನ್ನಾ ದಿನವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಘೋಷಿಸಿದೆ. ಬಿಹಾರದಲ್ಲಿ  ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಆಡಳಿತಾರೂಢ ಜೆಡಿಯು ಹಾಗೂ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿಗೆ ಮುಂಬರುವ ಚುನಾವಣೆಯಲ್ಲಿ ಸಡ್ಡು ಹೊಡೆಯುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

‘ಸಾಮಾಜಿಕ ನ್ಯಾಯಕ್ಕಾಗಿ ಕರ್ಪೂರಿ ಠಾಕೂರ್‌ ನಡೆಸಿದ ಹೋರಾಟ ಅನನ್ಯ’ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘2011ರಲ್ಲಿ ನಡೆಸಿದ್ದ ಸಾಮಾಜಿಕ–ಆರ್ಥಿಕ ಮತ್ತು ಜಾತಿ ಗಣತಿಯ ವರದಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ಬಹಿರಂಗಗೊಳಿಸುತ್ತಿಲ್ಲ. ಜಾತಿ ಗಣತಿ ವಿಚಾರವಾಗಿ ಬಿಜೆಪಿ ಹೊಂದಿರುವ ಅಸಡ್ಡೆಯನ್ನು ಇದು ತೋರಿಸುತ್ತದೆ’ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಈ ಕುರಿತು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಬಿಹಾರ ಸರ್ಕಾರ ಜಾತಿ ಗಣತಿ ನಡೆಸಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ, ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ’ ಎಂದು ಲಾಲು ಪ್ರಸಾದ್ ಹೇಳಿದ್ದಾರೆ.‌ 

‘ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಕುರಿತು ಮುಂಗೇರಿ ಲಾಲ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಠಾಕೂರ್‌ ಮುಂದಾಗಿದ್ದಾಗ ಜನಸಂಘದ ನಾಯಕರು ವಿರೋಧ ವ್ಯಕ್ತಪಡಿಸಿದ್ದರು’ ಎಂದು ಆರ್‌ಜೆಡಿಯ ಸಂಸದ ಮನೋಜ್‌ಕುಮಾರ್‌ ಝಾ ಹಾಗೂ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ.

ನಿತೀಶ್ ಕುಮಾರ್
ನಿತೀಶ್ ಕುಮಾರ್
ಲಾಲು ಪ್ರಸಾದ್
ಲಾಲು ಪ್ರಸಾದ್
ಕರ್ಪೂರಿ ಠಾಕೂರ್‌ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಘೋಷಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ. ಆದರೆ ಇದು ನಮ್ಮ ಬಹಳ ಹಳೆಯ ಬೇಡಿಕೆಯಾಗಿತ್ತು ಎಂಬುದನ್ನು ಅವರಿಗೆ ನೆನಪಿಸಲು ಬಯಸುತ್ತೇನೆ
ನಿತೀಶ್‌ ಕುಮಾರ್, ಬಿಹಾರ ಮುಖ್ಯಮಂತ್ರಿ
ಸಾಮಾಜಿಕ ನ್ಯಾಯ ಇಲ್ಲದೇ ದೇಶದ ಪ್ರಗತಿ ಸಾಧ್ಯವಿಲ್ಲ ಎಂಬುದು ಕರ್ಪೂರಿ ಠಾಕೂರ್ ಅವರ ದೃಢವಾದ ನಂಬಿಕೆಯಾಗಿತ್ತು. ಅವರು ಜಾತಿ ಗಣತಿ ಪರವೂ ಇದ್ದರು. ಆದರೆ ಜಾತಿಗಣತಿಯನ್ನು ಬಿಜೆಪಿ ವಿರೋಧಿಸುತ್ತಿದೆ..
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT