ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು-ಬಿಳುಪು ಪತ್ರ ಸಮರ: ಮೋದಿ ಆಡಳಿತ ‘ಅನ್ಯಾಯ ಕಾಲ’– ಕಾಂಗ್ರೆಸ್‌

Published 8 ಫೆಬ್ರುವರಿ 2024, 18:21 IST
Last Updated 8 ಫೆಬ್ರುವರಿ 2024, 18:21 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ‘ಕಪ್ಪು ಪತ್ರ’ವನ್ನು ಕಾಂಗ್ರೆಸ್‌ ಗುರುವಾರ ಬಿಡುಗಡೆಗೊಳಿಸಿತು.

ಯುಪಿಎ ಅವಧಿಯ ಆರ್ಥಿಕತೆ ಕುರಿತು ಕೇಂದ್ರ ಸರ್ಕಾರ ‘ಶ್ವೇತ ಪತ್ರ’ ಹೊರಡಿಸುವುದಕ್ಕಿಂತ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 54 ಪುಟಗಳ ‘ಕಪ್ಪು ಪತ್ರ’ ಬಿಡುಗಡೆ ಮಾಡಿದರು.

ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಗೊಳಿಸುವುದು ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ಕಡೆಗಣನೆಯಂತಹ ಆಂಶಗಳತ್ತ ‘ಕಪ್ಪು ಪತ್ರ’ ಬೊಟ್ಟುಮಾಡಿದೆ. ಮೋದಿ ಸರ್ಕಾರದ 10 ವರ್ಷಗಳ ಆಡಳಿತವನ್ನು ‘ಅನ್ಯಾಯದ ಕಾಲ’ ಎಂದು ಆರೋಪಿಸಿದೆ. 

‘ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡುವಾಗ ತಮ್ಮ ವೈಫಲ್ಯಗಳನ್ನು ಮುಚ್ಚಿಡುವರು. ನಾವು ಸರ್ಕಾರದ ಲೋಪಗಳ ಬಗ್ಗೆ ಮಾತನಾಡುವಾಗ ಅದಕ್ಕೆ ಯಾವುದೇ ಪ್ರಾಮುಖ್ಯ ಕೊಡುವುದಿಲ್ಲ. ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ‘ಕಪ್ಪು ಪತ್ರ’ ಹೊರ ತಂದಿದ್ದೇವೆ’ ಎಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಹೇಳಿದರು. 

‘ಮೋದಿ ಸರ್ಕಾರದ 10 ವರ್ಷಗಳ ಆಡಳಿತವು ದೇಶದ ಆರ್ಥಿಕತೆಯನ್ನು ನುಚ್ಚುನೂರು ಮಾಡಿದೆ. ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿದೆ. ಕೃಷಿ ಕ್ಷೇತ್ರವನ್ನು ನಾಶಪಡಿಸಿದೆ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕುಮ್ಮಕ್ಕು ನೀಡಿದೆ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಅನ್ಯಾಯ ಎಸಗಿದೆ’ ಎಂದು ಆರೋಪಿಸಿದೆ. ‘ಆರ್ಥಿಕತೆಯ ಮೇಲಿನ ಅನ್ಯಾಯ’ ವಿಭಾಗದಲ್ಲಿ ನಿರುದ್ಯೋಗ ಬಿಕ್ಕಟ್ಟು ಮತ್ತು ಉದ್ಯೋಗ ಕೊರತೆ ಬಗ್ಗೆ ವಿವರಿಸಲಾಗಿದೆ.  

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ‘ಬೆಲೆ ಏರಿಕೆ ಬಗ್ಗೆ ಕೇಳಿದಾಗ ಪ್ರಧಾನಿಯವರು ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಬಗ್ಗೆ ಮಾತನಾಡುತ್ತಾರೆ. ನೆಹರೂ ಅವರನ್ನು ಟೀಕಿಸುವ ಬದಲು, ನೀವು ಪ್ರಸ್ತುತ ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ಮಾತನಾಡುವುದು ಮುಖ್ಯ’ ಎಂದರು.

‘ಕಪ್ಪು ಪತ್ರ’ದಲ್ಲಿ ಏನೇನಿದೆ?

l→ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆಗಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ‘ಅನ್ಯಾಯ’ಗಳನ್ನು ತೋರಿಸಲಾಗಿದೆ

l→ಮೋದಿ ಸರ್ಕಾರ ಬೆಲೆ ಏರಿಕೆ ಬಗ್ಗೆ ಮೌನವಹಿಸಿದೆ. ಪೆಟ್ರೋಲ್, ಡೀಸೆಲ್ ಮತ್ತು ದಿನಬಳಕೆ ವಸ್ತುಗಳ ದರ ದಾಖಲೆ ಮಟ್ಟಕ್ಕೆ ತಲುಪಿದೆ

l→2016ರ ನೋಟು ರದ್ದತಿ ಕ್ರಮ ದೊಡ್ಡ ಪ್ರಮಾದವಾಗಿತ್ತು. ಅದರಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ದುಷ್ಪರಿಣಾಮಗಳು ದೇಶವನ್ನು ಇಂದಿಗೂ ಕಾಡುತ್ತಿದೆ

l→2012ರಲ್ಲಿ ಒಂದು ಕೋಟಿಯಷ್ಟಿದ್ದ ನಿರುದ್ಯೋಗಿಗಳ ಸಂಖ್ಯೆ 2022 ರಲ್ಲಿ ನಾಲ್ಕು ಕೋಟಿಗಳಿಗೆ ಏರಿಕೆಯಾಗಿದೆ

l→ನೋಟು ರದ್ದತಿ ಮತ್ತು ಜಿಎಸ್‌ಟಿಯಲ್ಲಿನ ಲೋಪಗಳಿಂದ ಶ್ರೀಮಂತ –ಬಡವರ ನಡುವಿನ ಅಂತರ ಇನ್ನಷ್ಟು ಹೆಚ್ಚಿದೆ. ರೈತರು ಮತ್ತು ಕೂಲಿ ಕಾರ್ಮಿಕರ ಭವಿಷ್ಯ ಹಾಳಾಗಿದೆ

l→ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ‘ಚುನಾಯಿತ ಸರ್ವಾಧಿಕಾರ’ವಾಗಿ ಬದಲಾಗಿದ್ದು, ಒಕ್ಕೂಟ ವ್ಯವಸ್ಥೆ ದುರ್ಬಲಗೊಂಡಿದೆ

l→ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮತ್ತು ದಬ್ಬಾಳಿಕೆ ಹೆಚ್ಚಿದೆ

Quote -

ಈ ದೇಶಕ್ಕೆ ಸ್ವಾತಂತ್ರ್ಯವನ್ನು ಖಾತರಿಪಡಿಸಿದ್ದ ಕಾಂಗ್ರೆಸ್‌ ಪಕ್ಷವು 2024 ರಲ್ಲಿ ದೇಶವನ್ನು ಬಿಜೆಪಿಯ 'ಅನ್ಯಾಯದ ಅಂಧಕಾರ’ದಿಂದ ಪಾರು ಮಾಡಲಿದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

‘ದೃಷ್ಟಿ ಬೊಟ್ಟು’ ಇಟ್ಟಿದ್ದಾರೆ:

ಮೋದಿ ‘ಕಾಂಗ್ರೆಸ್‌ ಹೊರಡಿಸಿರುವ ‘ಕಪ್ಪು ಪತ್ರ’ವು ನಮ್ಮ ಸರ್ಕಾರದ ಸಾಧನೆಗಳಿಗೆ ‘ದೃಷ್ಟಿ ಬೊಟ್ಟು’ ಇಟ್ಟಂತೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದರು. ‘ಏನಾದರೂ ಒಳ್ಳೆಯ ಕೆಲಸ ನಡೆದಾಗ ಕೆಟ್ಟ ದೃಷ್ಟಿ ಬೀಳದಿರಲೆಂದು ‘ಕಾಲಾ ಟೀಕಾ’ (ಕಪ್ಪು ಬೊಟ್ಟು) ಇಡುವ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆಯ ಮೇಲೆ ಕೆಟ್ಟ ದೃಷ್ಟಿ ಬೀಳದಿರುವ ಕಾಂಗ್ರೆಸ್‌ನವರು ‘ಕಪ್ಪು ಪತ್ರ’ದ ಮೂಲಕ ದೃಷ್ಟಿ ಬೊಟ್ಟು ಇಟ್ಟಿದ್ದಾರೆ. ಆ ಕೆಲಸ ಮಾಡಿದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರಾಜ್ಯಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT