ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

8 ಕೋಟಿ ಉದ್ಯೋಗ– ಅರ್ಧ ಸತ್ಯ: ಕೇಂದ್ರದ ವಿರುದ್ಧ ಜೈರಾಮ್ ರಮೇಶ್‌ ವಾಗ್ದಾಳಿ

Published : 30 ಸೆಪ್ಟೆಂಬರ್ 2024, 14:28 IST
Last Updated : 30 ಸೆಪ್ಟೆಂಬರ್ 2024, 14:28 IST
ಫಾಲೋ ಮಾಡಿ
Comments

ನವದೆಹಲಿ: 2021ರಿಂದ 2024ರವರೆಗೆ 8 ಕೋಟಿ ಉದ್ಯೋಗ ಸೃಷ್ಟಿಸಿರುವುದಾಗಿ ಮತ್ತು 6.2 ಕೋಟಿ ಇಪಿಎಫ್ಒ ಬಳಕೆದಾರರು ಇರುವುದಾಗಿ ಕೇಂದ್ರ ಸರ್ಕಾರವು ಹೇಳಿಕೊಂಡಿದೆ. ಅದರೆ ವಾಸ್ತವದಲ್ಲಿ 2014–24ರವರೆಗೆ ‘ಉದ್ಯೋಗನಷ್ಟ ಬೆಳವಣಿಗೆ’ಯನ್ನು ಕಂಡಿದ್ದೇವೆ ಎಂದು ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು,‘ಯು–ಟರ್ನ್ ಮತ್ತು ಹಗರಣ’ಗಳ ಮಧ್ಯೆ ಸರ್ಕಾರ, ಮನುಷ್ಯಾತೀತ ಪ್ರಧಾನಿ ಮತ್ತು ಅವರ ಒಡ್ಡೋಲಗವು 2021–24ರ ಅವಧಿಯಲ್ಲಿ 8 ಕೋಟಿ ಉದ್ಯೋಗ ಸೃಷ್ಟಿಸಿರುವುದಾಗಿ ಹೇಳಿಕೊಂಡು ನೂತನ ಆರ್ಥಿಕ ದಾಖಲೆ ನಿರ್ಮಿಸಲು ಯತ್ನಿಸುತ್ತಿದೆ ಎಂದು ಹರಿಹಾಯ್ದರು.

ಇಪಿಎಫ್ಒ ಚಂದಾದಾರಿಕೆ ಮತ್ತು ಉದ್ಯೋಗ ಸೃಷ್ಟಿ ವಿಚಾರದಲ್ಲಿ ಸರ್ಕಾರದ ಹೇಳಿಕೆಗಳು ‘ಅರ್ಧ ಸತ್ಯ’ವಷ್ಟೆ. ಉದ್ಯೋಗ ಸೃಷ್ಟಿ ವಿಚಾರದಲ್ಲಿ ತನ್ನ ವಾಗ್ದಾನವನ್ನು ಸಮರ್ಥಿಸಿಕೊಳ್ಳಲು ಸರ್ಕಾರವು ಉದ್ಯೋಗದ ವ್ಯಾಖ್ಯಾನವನ್ನೇ ವಿಸ್ತರಿಸಿದೆ ಎಂದರು.

ಮಹಿಳೆಯರು ಮನೆಯಲ್ಲಿ ಮಾಡುವ ವೇತನರಹಿತ ಕೆಲಸವನ್ನೂ ‘ಉದ್ಯೋಗ’ ಎಂದು ಸೇರಿಸಿ  ‘ಉದ್ಯೋಗ ಕ್ಷೇತ್ರದಲ್ಲಾದ ಬೆಳವಣಿಗೆ’ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಸ್ತುತ ಉದ್ಯೋಗಿಗಳು ಕಡಿಮೆ ಉತ್ಪಾದಕತೆ ಇರುವ ಅನೌಪಚಾರಿಕ ಮತ್ತು ಕೃಷಿ ಕ್ಷೇತ್ರದತ್ತ ವಾಲುತ್ತಿದ್ದಾರೆ. ಕೆಎಲ್‌ಇಎಂಎಸ್‌ (ಬಂಡವಾಳ– ಶ್ರಮ– ಎನರ್ಜಿ– ವಸ್ತು–ಸೇವೆ)  ಇದನ್ನೇ ‘ಉದ್ಯೋಗ ಸೃಷ್ಟಿ’ ಎಂದು ತಿಳಿಸಿದೆ. ಹೀಗಾಗಿಯೇ ಕೋವಿಡ್‌ ಸಾಂಕ್ರಾಮಿಕ ವರ್ಷದಲ್ಲೂ ಉದ್ಯೋಗ ಸೃಷ್ಟಿಯಾಗಿದೆ ಎಂದು  ಕೆಎಲ್‌ಇಎಂಎಸ್‌ ದತ್ತಾಂಶವು  ಹೇಳಿದೆ ಎಂದರು.

2021ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೇವಲ 12 ಲಕ್ಷ  ಉದ್ಯೋಗ ಸೃಷ್ಟಿಯಾಗಿದ್ದರೆ, ಕೃಷಿ ಕ್ಷೇತ್ರದಲ್ಲಿ ₹1.8 ಕೋಟಿ ಉದ್ಯೋಗ ‘ಸೃಷ್ಟಿ’ಯಾಗಿದೆ ಎಂದು ದತ್ತಾಂಶದಲ್ಲಿ ತಿಳಿಸಲಾಗಿದೆ. ಅಂದರೆ, ಕೈಗಾರಿಕಾ ಕಾರ್ಮಿಕರು, ಶಿಕ್ಷಕರು, ಗಣಿಗಳಲ್ಲಿ ದುಡಿಯುವವರು ಕೋವಿಡ್‌–19 ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಮನೆಗೆ ಹಿಂದಿರುಗಿ ಕೃಷಿ ಆರಂಭಿಸಿದ್ದರು. ಇದನ್ನೂ ಕೃಷಿ ಕ್ಷೇತ್ರದಲ್ಲಿ ‘ಉದ್ಯೋಗ ಸೃಷ್ಟಿ’ ಎಂದು ಉಲ್ಲೇಖಿಸಲಾಗಿದೆ ಎಂದು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT