ನವದೆಹಲಿ : ಮಣಿಪುರದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ. ಹಿಂದಿನ ಯಾವ ಪ್ರಧಾನಿಯೂ ಒಂದು ರಾಜ್ಯವನ್ನು ಮತ್ತು ಅದರ ಜನರನ್ನು ಈ ರೀತಿ ಸಂಪೂರ್ಣವಾಗಿ ಪರಿತ್ಯಜಿಸಿದ್ದೇ ಇಲ್ಲ ಎಂದು ಆರೋಪಿಸಿದೆ.
ಮಣಿಪುರದಲ್ಲಿ ಗಲಭೆ ಏಳಲು ಅಲ್ಲಿಯ ಡಬಲ್ ಎಂಜಿನ್ ಸರ್ಕಾರವೇ (ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ) ಕಾರಣ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ದೂಷಿಸಿದ್ದಾರೆ. ಬಿಜೆಪಿಯ ತಪ್ಪು ನೀತಿಗಳು ಮತ್ತು ಪ್ರಧಾನಿಯ ಆದ್ಯತೆಗಳೇ ಮಣಿಪುರದ ಇಂದಿನ ಸ್ಥಿತಿಗೆ ಕಾರಣ ಎಂದಿದ್ದಾರೆ.
‘ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತಿತರ ಪ್ರಮುಖ ಕೆಲಸಗಳಿಂದ ಬಿಡುವಾದ ಬಳಿಕವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರಕ್ಕೆ ಭೇಟಿ ನೀಡಿದರು. ಆದರೆ ಆ ಭೇಟಿಯಿಂದ ಒಳಿತಾಗುವ ಬದಲು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸಾಮಾಜಿಕ ಸಾಮರಸ್ಯ ಸಂಪೂರ್ಣವಾಗಿ ಮುರಿದುಬಿತ್ತು. ಭೀಕರ ಅಪರಾಧ ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಿವೆ. ಹಲವಾರು ಜನರು ಈಗಲೂ ಆಶ್ರಯ ಶಿಬಿರಗಳಲ್ಲಿ ನೆಲೆಸಿದ್ದಾರೆ. ಸಶಸ್ತ್ರ ಬಂಡುಕೋರರು ಮತ್ತು ರಾಜ್ಯ ಪೊಲೀಸರ ನಡುವೆ ಪ್ರತಿದಿನ ಘರ್ಷಣೆಗಳು ನಡೆಯುತ್ತಿವೆ’ ಎಂದು ಜೈರಾಮ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಷ್ಟೆಲ್ಲಾ ಕೆಡುಕುಗಳು ನಡೆಯುತ್ತಿದ್ದರೂ ಮೋದಿ ಅವರು ಸಂಪೂರ್ಣವಾಗಿ ಮೌನ ಕಾಯ್ದುಕೊಂಡಿದ್ದಾರೆ. ಮಣಿಪುರ ಕುರಿತು ಅವರು ಲೋಕಸಭೆಯಲ್ಲಿ ಆಗಸ್ಟ್ 10ರಂದು ಮಾತನಾಡಿದರು. ಆಗಲೇ ಸಾಕಷ್ಟು ತಡವಾಗಿತ್ತು. 133 ನಿಮಿಷಗಳ ಭಾಷಣದಲ್ಲಿ ಕೇವಲ ಐದು ನಿಮಿಷವನ್ನು ಮಣಿಪುರ ಸಂಘರ್ಷಕ್ಕೆ ಅವರು ಮೀಸಲಿಟ್ಟರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ಕಡೆಯ ಬಾರಿ ಮಣಿಪುರಕ್ಕೆ ಭೇಟಿ ನೀಡಿದ್ದು ಯಾವಾಗ? ಅಲ್ಲಿಯ ಮುಖ್ಯಮಂತ್ರಿ ಜೊತೆ ಕಡೆಯ ಬಾರಿ ಚರ್ಚೆ ನಡೆಸಿದ್ದು ಯಾವಾಗ? ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಮಣಿಪುರ ವಿಚಾರವಾಗಿ ಕಡೆಯ ಬಾರಿ ಚರ್ಚೆ ನಡೆಸಿದ್ದು ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.