ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆ ಮಂಡಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ್ ಮತ್ತು ಹಿಬಿ ಈಡನ್ ಅವರು ನೋಟಿಸ್ ನೀಡಿದ್ದಾರೆ.
ಇಂದು ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಯಿತು. ಮಸೂದೆಯನ್ನು ಒಮ್ಮತವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ ಸಂಸದರು ನಿರ್ಧರಿಸಿದ್ದಾರೆ.
ಮಸೂದೆ ತಿದ್ದುಪಡಿಯನ್ನು ‘ಅಸಂವಿಧಾನಿಕ’ ಎಂದು ಕರೆದಿರುವ ಹಿಬಿ ಈಡನ್, ‘ಆಸ್ತಿ ಹಕ್ಕನ್ನು(ಆರ್ಟಿಕಲ್ 300ಎ) ಇದು ನಿರಾಕರಿಸುತ್ತದೆ’ ಎಂದು ಹೇಳಿದ್ದಾರೆ.
‘ತಿದ್ದುಪಡಿ ಮಸೂದೆಯು ವ್ಯಕ್ತಿ ಮತ್ತು ಧಾರ್ಮಿಕ ಸಂಸ್ಥೆಗಳ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಹಕ್ಕನ್ನೂ(Article 25) ನಿರಾಕರಿಸುತ್ತದೆ. ಧಾರ್ಮಿಕ ದತ್ತಿಗಳ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದಲ್ಲದೇ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಸಾಧ್ಯತೆಯಿದೆ’ ಎಂದು ಈಡನ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಇತರ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ, ಶಿವಸೇನೆ(ಯುಟಿಬಿ), ಎನ್‌ಸಿಪಿ ಪಕ್ಷಗಳೂ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.
ವಕ್ಫ್ ಮಂಡಳಿಯ ಕಾರ್ಯದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಹಾಗೂ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರವು 1995ರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಕುರಿತ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲು ನಿರ್ಧರಿಸಿದೆ.