ನವದೆಹಲಿ: ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ವೆಚ್ಚವಾಗಿ ₹70 ಲಕ್ಷದಂತೆ ನೀಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಚುನಾವಣೆ ವೆಚ್ಚಕ್ಕೆ ಸಂಬಂಧಿಸಿ, ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಈ ವಿವರ ನೀಡಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಕ್ರಮಾದಿತ್ಯ ಸಿಂಗ್ ಅವರಿಗೆ ಗರಿಷ್ಠ ಮೊತ್ತ ₹80 ಲಕ್ಷ ನೀಡಲಾಗಿತ್ತು ಎಂದೂ ತಿಳಿಸಲಾಗಿದೆ.
ವಿಕ್ರಮಾದಿತ್ಯ ಸಿಂಗ್ ಅವರು ಬಿಜೆಪಿಯ ಕಂಗನಾ ರನೌತ್ ವಿರುದ್ಧ ಪರಾಭವಗೊಂಡರು.
ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಧಾಕೃಷ್ಣ, ಪಂಜಾಬ್‌ನ ಆನಂದಪುರ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಜಯ ಇಂದರ್ ಸಿಂಗ್ಲಾ ಅವರಿಗೂ ತಲಾ ₹70 ಲಕ್ಷ ನೀಡಲಾಗಿತ್ತು.
ಕಿಶೋರಿಲಾಲ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಮಾಣಿಕಂ ಟ್ಯಾಗೋರ್ ಅವರಿಗೂ ತಲಾ ₹70 ಲಕ್ಷ. ಹಿರಿಯ ನಾಯಕರಾದ ಆನಂದ ಶರ್ಮಾ ಹಾಗೂ ದಿಗ್ವಿಜಯ ಸಿಂಗ್ ಅವರಿಗೆ ಕ್ರಮವಾಗಿ ₹46 ಹಾಗೂ ₹50 ಲಕ್ಷ ನೀಡಲಾಗಿತ್ತು ಎಂದು ಆಯೋಗಕ್ಕೆ ಕಾಂಗ್ರೆಸ್ ಮಾಹಿತಿ ನೀಡಿದೆ.