ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಬಗ್ಗೆ ಕಾಂಗ್ರೆಸ್‌ನದು ಬಿಜೆಪಿ, ಸಂಘಪರಿವಾರದ ಮನಃಸ್ಥಿತಿ- ಸಿಪಿಎಂ ವಾಗ್ದಾಳಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ
Published 11 ಏಪ್ರಿಲ್ 2024, 16:13 IST
Last Updated 11 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ತಿರುವನಂತಪುರ : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಕಾಂಗ್ರೆಸ್‌ ಮೌನ ವಹಿಸಿದ್ದು, ಸಂಘಪರಿವಾರ ಮತ್ತು ಬಿಜೆಪಿಯ ಮನಃಸ್ಥಿತಿಯನ್ನೇ ಪ್ರದರ್ಶಿಸುತ್ತಿದೆ ಎಂದು ಕೇರಳದ ಆಡಳಿತರೂಢ ಸಿಪಿಎಂ ಗುರುವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. 

ಸಿಪಿಎಂ ಅಭ್ಯರ್ಥಿ ವಿ. ಜಾಯ್ ಸ್ಪರ್ಧಿಸುತ್ತಿರುವ ಅಟ್ಟಿಂಗಲ್‌ನಲ್ಲಿ ನಡೆದ ಎಲ್‌ಡಿಎಫ್ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಸಿಪಿಎಂ ಹಿರಿಯ ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಎಎ ಬಗ್ಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮೌನವಾಗಿದ್ದಾರೆ ಎಂದು ತಮ್ಮ ಆರೋಪಗಳನ್ನು ಪುನರುಚ್ಚರಿಸಿದರು.

‘ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಎ ಬಗ್ಗೆ ಏನನ್ನೂ ಹೇಳಿಲ್ಲ. ಅಮೆರಿಕ ಸೇರಿದಂತೆ ಹಲವು ದೇಶಗಳು ಸಿಎಎ ವಿರೋಧಿಸಿವೆ ಮತ್ತು ಟೀಕೆ ಕೂಡ ಮಾಡಿವೆ. ಆದರೆ, ಕಾಂಗ್ರೆಸ್‌ಗೆ ಅಂತಹ ನಿಲುವು ತೆಗೆದುಕೊಳ್ಳಲು ಅಥವಾ ಬಿಜೆಪಿ, ಸಂಘ ಪರಿವಾರದ ಕಾರ್ಯಸೂಚಿಯನ್ನು ವಿರೋಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯನ್ ಟೀಕಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಿಪಿಎಂ ನಾಯಕ ಥಾಮಸ್ ಐಸಾಕ್ ಅವರ  ಉದಾಹರಣೆ ನೀಡಿ, ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಇನ್ನಿತರ ತನಿಖಾ ಏಜೆನ್ಸಿಗಳು ತಮ್ಮದೇ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಾಗ ಕಾಂಗ್ರೆಸ್‌ ವಿರೋಧಿಸುತ್ತದೆ. ಆದರೆ, ಬೇರೆ ಪಕ್ಷಗಳ ನಾಯಕರ ಮೇಲೆ ಅವು ಕ್ರಮ ತೆಗೆದುಕೊಂಡರೆ ಅದು ಮೌನವಾಗಿರುತ್ತದೆ ಎಂದು ಕಿಡಿಕಾರಿದರು. 

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ್ದರಿಂದ ಇ.ಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದೂ ವಿಜಯನ್ ಆರೋಪಿಸಿದರು.

ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣದ ತನಿಖೆಗೆ ಸಂಬಂಧಿಸಿ ಐಸಾಕ್ ಅವರನ್ನು ಇ.ಡಿ ಏಕೆ ಬಂಧಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದ ಯುಡಿಎಫ್‌ ಸಂಸದರು ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆಯೂ ದನಿ ಎತ್ತದಿರುವುದಕ್ಕೆ ಮತದಾರರು ಭ್ರಮನಿರಸನಗೊಂಡಿದ್ದಾರೆ
–ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT