ನವದೆಹಲಿ: ಭೂಕುಸಿತದ ಸಾಧ್ಯತೆ ಕುರಿತು ನೀಡಿದ್ದ ಎಚ್ಚರಿಕೆಯನ್ನು ಕೇರಳ ಸರ್ಕಾರ ಕಡೆಗಣಿಸಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ.
ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಶಾ ಅವರ ಹೇಳಿಕೆಗಳನ್ನು ವಿಸ್ತೃತವಾಗಿ ಪರಿಶೀಲಿಸಲಾಗಿದೆ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಶಾ ಅವರು ರಾಜ್ಯಸಭೆಯ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆಗಿರುವ ಪ್ರಮೋದ್ ತಿವಾರಿ ಮತ್ತು ಸಂಸದ ದಿಗ್ವಿಜಯ್ ಸಿಂಗ್ ಅವರೂ ಪತ್ರಕ್ಕೆ ಸಹಿ ಮಾಡಿದ್ದು, ಅಮಿತ್ ಶಾ ಸದನವನ್ನು ಅವಮಾನಿಸಿದ್ದಾರೆ ಎಂದೂ ದೂರಲಾಗಿದೆ.
ವಯನಾಡು ದುರಂತದ ಬಗ್ಗೆ ಸಂಸತ್ತಿನಲ್ಲಿ ಬುಧವಾರ ಮಾತನಾಡಿದ್ದ ಅಮಿತ್ ಶಾ, ಭೂಕುಸಿತ ಸಾಧ್ಯತೆ ಕುರಿತು ಕೇರಳ ಸರ್ಕಾರಕ್ಕೆ ಜುಲೈ 23, 24, 25 ಹಾಗೂ 26ರಂದು ಮುನ್ನೆಚ್ಚರಿಕೆ ನೀಡಿದ್ದೆವು. ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೆ, ಹಲವು ಜೀವ ಉಳಿಸಬಹುದಾಗಿತ್ತು ಎಂದು ಹೇಳಿದ್ದರು.
ಅಮಿತ್ ಶಾ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲಗಳೆದಿದ್ದರು.