ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ: ರಾಹುಲ್ ಗಾಂಧಿ

Published 13 ಏಪ್ರಿಲ್ 2024, 14:26 IST
Last Updated 13 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ಬಸ್ತರ್‌/ ಜಗದಲ್ಪುರ (ಛತ್ತೀಸಗಢ): ಮುಂಬರುವ ಲೋಕಸಭಾ ಚುನಾವಣೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹಾಗೂ ಅವುಗಳನ್ನು ನಾಶಮಾಡಲು ಹೊರಟಿರುವ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದರು.

ಛತ್ತೀಸ್‌ಗಡದ ಬಸ್ತರ್‌ ಮತ್ತು ಜಗದಲ್ಪುರದಲ್ಲಿ ಅವರು ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಬಸ್ತರ್‌ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

‘ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಹೋರಾಡುತ್ತಿದೆ. ಮತ್ತೊಂದೆಡೆ, ನರೇಂದ್ರ ಮೋದಿ, ಅದಾನಿ ಮತ್ತು ಆರ್‌ಎಸ್‌ಎಸ್‌ನವರು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ಸಂವಿಧಾನವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಆದಿವಾಸಿಗಳ ಧರ್ಮ, ಸಿದ್ಧಾಂತ ಮತ್ತು ಇತಿಹಾಸದ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ. ಮೋದಿ ಸರ್ಕಾರವು ಆದಿವಾಸಿಗಳ ಜಮೀನನ್ನು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ’ ಎಂದು ದೂರಿದರು. 

‘ಬಿಜೆಪಿಯು ಉದ್ದೇಶಪೂರ್ವಕವಾಗಿ ‘ಆದಿವಾಸಿ’ ಜನರನ್ನು ‘ವನವಾಸಿ’ ಎಂದು ಕರೆಯುತ್ತಿದೆ. ಇದರ ಹಿಂದೆ ಅವರನ್ನು ಒಕ್ಕಲೆಬ್ಬಿಸುವ ಉದ್ದೇಶವಿದ್ದು, ನೀರು, ಅರಣ್ಯ ಮತ್ತು ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಅಡಗಿದೆ’ ಎಂದು ಟೀಕಿಸಿದರು.

ರಾಹುಲ್‌ ಹೇಳಿದ್ದು... 

  • ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬ ಕಾರಣ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ. ಬಿಜೆಪಿಯ ಮನಃಸ್ಥಿತಿಯನ್ನು ಇದು ತೋರಿಸುತ್ತದೆ.

  • ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ನಡೆಸಲಾಗುವುದು

  • ಪ್ರಧಾನಿ ಮೋದಿ ಅವರ ಅಧಿಕಾರದ ಅವಧಿಯಲ್ಲಿ 22 ಉದ್ಯಮಿಗಳ ಸಂಪತ್ತು ದೇಶದ 70 ಕೋಟಿ ಜನರ ಸಂಪತ್ತಿಗೆ ಸಮನಾಗುವ ರೀತಿಯಲ್ಲಿ ಬೆಳೆದಿದೆ. ಮೋದಿ ಅವರು ಈ ಉದ್ಯಮಿಗಳನ್ನು ದಿನದ 24 ಗಂಟೆಯೂ ಬೆಂಬಲಿಸುತ್ತಾರೆ

ಪ್ರಧಾನಿ ಮಾತಿಗೆ ಮರುಳಾಗಬೇಡಿ: ಪ್ರಿಯಾಂಕಾ

ರಾಮನಗರ (ಉತ್ತರಾಖಂಡ): ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಆಡುವ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತದಾರರಿಗೆ ತಿಳಿಸಿದರು.

ಉತ್ತರಾಖಂಡದ ರಾಮನಗರದಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ‘ಮೋದಿ ಸರ್ಕಾರದ 10 ವರ್ಷಗಳು ನಿಮ್ಮ ಜೀವನದಲ್ಲಿ ನಿಜವಾಗಿಯೂ ಸಕಾರಾತ್ಮಕ ಬದಲಾವಣೆಯನ್ನು ತಂದಿದೆಯೇ ಎಂಬುದನ್ನು ಮತ ಚಲಾಯಿಸುವ ಮುನ್ನ ನೀವು ನಿಮ್ಮಲ್ಲಿ ಪ್ರಾಮಾಣಿಕವಾಗಿ ಕೇಳಿಕೊಳ್ಳಿ’ ಎಂದು ಹೇಳಿದರು.

‘ಮೋದಿ ಸರ್ಕಾರ ತನ್ನ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT