ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ವಿಚಾರ: 'ಮತಾಂಧರನ್ನು ಶ್ಲಾಘಿಸಿ ಸ್ಮಾರಕ ನಿರ್ಮಿಸುವವರು'–ಪಾಕ್‌ಗೆ ಭಾರತ

Last Updated 6 ಜೂನ್ 2022, 10:20 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ವಕ್ತಾರರು ಪ್ರವಾದಿ ಮಹಮ್ಮದ್‌ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು ನೀಡಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುತ್ತಿರುವವರು ಮತ್ತೊಂದು ರಾಷ್ಟ್ರವನ್ನು ಟೀಕಿಸುತ್ತಿರುವುದು ಅವಿವೇಕದ ನಡೆ ಎಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು ಪಾಕಿಸ್ತಾನದ ಟೀಕೆಗೆ ತಿರುಗೇಟು ನೀಡಿದ್ದಾರೆ. 'ನಿರಂತರವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುತ್ತಿರುವವರು ಮತ್ತೊಂದು ರಾಷ್ಟ್ರವು ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳಬೇಕಾದ ರೀತಿಯ ಬಗ್ಗೆ ಮಾತನಾಡುತ್ತಿರುವುದು ಅಸಂಬದ್ಧವಾದುದು' ಎಂದು ಹೇಳಿದ್ದಾರೆ.

'ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಹಾಗೂ ಅಹಮದೀಯರು ಸೇರಿದಂತೆ ಅಲ್ಪಸಂಖ್ಯಾತರು ಪಾಕಿಸ್ತಾನದಿಂದ ನಿರಂತರ ಕಿರುಕುಳಕ್ಕೆ ಒಳಗಾಗಿರುವುದಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ' ಎಂದಿದ್ದಾರೆ.

ಬಿಜೆಪಿ ವಕ್ತಾರರ ವಿವಾದಾತ್ಮಕ ಹೇಳಿಕೆಗಳನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಝ್‌ ಷರೀಫ್‌ ಭಾನುವಾರ ಖಂಡಿಸಿದ್ದರು.

'ಭಾರತ ಸರ್ಕಾರವು ಎಲ್ಲ ಧರ್ಮಗಳ ಬಗ್ಗೆ ಅಪಾರ ಗೌರವವನ್ನು ತೋರುತ್ತದೆ. ಇದು ಪಾಕಿಸ್ತಾನಕ್ಕಿಂತ ಭಿನ್ನವಾದುದು, ಅಲ್ಲಿ ಮತಾಂಧರನ್ನು ಶ್ಲಾಘಿಸಲಾಗುತ್ತದೆ ಹಾಗೂ ಅವರ ಗೌರವಾರ್ಥ ಸ್ಮಾರಕಗಳನ್ನು ನಿರ್ಮಿಸಲಾಗುತ್ತದೆ' ಎಂದು ಬಾಗ್ಚಿ ಕುಟುಕಿದ್ದಾರೆ.

'ಪಾಕಿಸ್ತಾನವು ಅನವಶ್ಯಕವಾಗಿ ಗಾಬರಿ ಹುಟ್ಟಿಸುವುದು ಹಾಗೂ ಭಾರತದಲ್ಲಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವುದರಲ್ಲಿ ನಿರತರಾಗುವುದನ್ನು ಬಿಟ್ಟು, ತನ್ನಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಹಾಗೂ ಅವರ ಉನ್ನತಿಯ ಕಡೆಗೆ ಗಮನಹರಿಸಲಿ' ಎಂದು ಆಗ್ರಹಿಸಿದ್ದಾರೆ.

ಅವಹೇಳನಕಾರಿ ಹೇಳಿಕೆಗಳಿಗೆ ಗಲ್ಫ್‌ ರಾಷ್ಟ್ರಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿಯು ಭಾನುವಾರ ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಅಮಾನತು ಮಾಡಿದ್ದು, ಪಕ್ಷದ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್‌ ಜಿಂದಾಲ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT