ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರ್ದಿಕ್, ಕೃಣಾಲ್ ಪಾಂಡ್ಯ ಸಹೋದರರಿಗೆ ವಂಚನೆ: ಮಲಸಹೋದರನಿಗೆ ಜಾಮೀನು ನಿರಾಕರಣೆ

Published 16 ಮೇ 2024, 13:37 IST
Last Updated 16 ಮೇ 2024, 13:37 IST
ಅಕ್ಷರ ಗಾತ್ರ

ಮುಂಬೈ: ಪಾಲಿಮರ್ ಉದ್ಯಮದಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಅವರಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಅವರ ಮಲಸಹೋದರನಿಗೆ ಇಲ್ಲಿನ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಇದೊಂದು ಗಂಭೀರ ಆರ್ಥಿಕ ಅಪರಾಧ ಮತ್ತು ಹಣದ ಮೊತ್ತವೂ ದೊಡ್ಡದಿದೆ ಎಂದು ನ್ಯಾಯಾಲಯ ಹೇಳಿದೆ.

37 ವರ್ಷದ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದ(ಇಒಡಬ್ಕ್ಯು) ಅಧಿಕಾರಿಗಳು ನಂಬಿಕೆ ದ್ರೋಹ, ಬೆದರಿಕೆ, ಫೋರ್ಜರಿ ಮತ್ತು ಇತರೆ ಸಂಬಂಧಿತ ಸೆಕ್ಷನ್‌ಗಳ ಅಡಿ ಏಪ್ರಿಲ್‌ನಲ್ಲಿ ಬಂಧಿಸಿದ್ದರು.

ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್‌.ಬಿ. ಶಿಂಧೆ ಅವರು ವೈಭವ್ ಪಾಂಡ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ

ಈತ ಕ್ರಿಕೆಟಿಗರಾದ ಹಾರ್ದಿಕ್ ಮತ್ತು ಕೃಣಾಲ್ ಅವರಿಗೆ ₹4 ಕೋಟಿ ವಂಚನೆ ಮಾಡಿರುವ ಆರೋಪವಿದೆ.

ಪಾಂಡ್ಯ ಸಹೋದರರ ಜೊತೆ ಸೇರಿ ವೈಭವ್ ಪಾಲುದಾರಿಕೆಯಲ್ಲಿ ಪಾಲಿಮರ್ ಉದ್ಯಮ ಆರಂಭಿಸಿದ್ದರು. ಹಾರ್ದಿಕ್ ಮತ್ತು ಕೃಣಾಲ್ ತಲಾ ಶೇ 40ರಷ್ಟು ಮತ್ತು ವೈಭವ್ ಶೇ 20ರಷ್ಟು ಹೂಡಿಕೆ ಮಾಡಿದ್ದರು. ವೈಭವ್ ಉದ್ಯಮದ ಸಂಪೂರ್ಣ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದರು. ಉದ್ಯಮದಲ್ಲಿ ಬಂದ ಲಾಭವನ್ನು ಹೂಡಿಕೆಯ ಶೇಕಡಾವಾರು ಪ್ರಮಾಣದಲ್ಲೇ ಹಂಚಿಕೆ ಮಾಡಬೇಕೆಂಬ ನಿಯಮವಿತ್ತು. ಈ ನಡುವೆ, ವೈಭವ್ ಮತ್ತೊಂದು ಪಾಲಿಮರ್ ಉದ್ಯಮ ಆರಂಭಿಸಿದ್ದು, ಇದು ಪಾಲುದಾರಿಕೆ ನಿಯಮಗಳ ಉಲ್ಲಂಘನೆಯಾಗಿದೆ. ಇದರಿಂದ ಮೂಲ ಕಂಪನಿಗೆ ನಷ್ಟವಾಗಿದೆ. ಈ ನಡುವೆ ಹಾರ್ದಿ್ಕ್ ಪಾಂಡ್ಯ ಅವರ ಸಹಿಯನ್ನು ನಕಲು ಮಾಡಿ ತಮ್ಮ ಪಾಲಿನ ಲಾಭದ ಷೇರನ್ನು ಶೇ 20ರಿಂದ 33ಕ್ಕೆ ಹೆಚ್ಚಿಸಿಕೊಂಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

ವೈಭವ್ ಎರಡು ಬಾರಿ ಅಕ್ರಮವಾಗಿ ತಲಾ ₹72 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT