ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಫೆಬ್ರುವರಿ ವೇಳೆಗೆ ದೇಶದ ಶೇ 50ರಷ್ಟು ಜನರಿಗೆ ಸೋಂಕು!

Last Updated 19 ಅಕ್ಟೋಬರ್ 2020, 16:59 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ಫೆಬ್ರುವರಿ ಹೊತ್ತಿಗೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಠ ಶೇ 50ರಷ್ಟು ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲುವ ಸಾಧ್ಯತೆ ಇರುವುದಾಗಿ ಸರ್ಕಾರ ರೂಪಿಸಿರುವ ಕೋವಿಡ್‌ ಅಂದಾಜು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಭಾರತದಲ್ಲಿ ಈವರೆಗೂ 75.5 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಾಗತಿಕ ಕೋವಿಡ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸೆಪ್ಟೆಂಬರ್‌ನಲ್ಲಿ ತೀವ್ರ ಏರಿಕೆಯಾಗಿದ್ದ ನಿತ್ಯದ ಪ್ರಕರಣಗಳ ಸಂಖ್ಯೆ ಪ್ರಸ್ತುತ ಇಳಿಮುಖವಾಗಿದೆ.

ಮ್ಯಾಥಮೆಟಿಕಲ್‌ ಮಾಡೆಲ್‌ ಅಂದಾಜಿನ ಪ್ರಕಾರ, ದೇಶದಲ್ಲಿ ಸುಮಾರು ಶೇ 30ರಷ್ಟು ಜನರು ಸೋಂಕಿತರಾಗಿದ್ದಾರೆ ಹಾಗೂ ಫೆಬ್ರುವರಿ ವೇಳೆ ಈ ಪ್ರಮಾಣ ಶೇ 50ಕ್ಕೆ ತಲುಪಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್‌, ಸಮಿತಿಯ ಸದಸ್ಯ ಮನೀಂದ್ರ ಅಗರ್‌ವಾಲ್‌ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 5,984 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 15,069 ಮಂದಿ ಗುಣಮುಖರಾಗಿದ್ದಾರೆ ಹಾಗೂ 125 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 1,73,759 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ 1,234 ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಕೇರಳದಲ್ಲಿ ಸೋಮವಾರ 7,469 ಮಂದಿ ಗುಣಮುಖರಾಗಿದ್ದು, 5,022 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,33,881ಕ್ಕೆ ಏರಿಕೆಯಾಗಿದೆ. ಈವರೆಗೂ ಸೋಂಕಿನಿಂದ 1,182 ಮಂದಿ ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 3,992 ಹೊಸ ಪ್ರಕರಣಗಳು ದಾಖಲಾಗಿದ್ದು, 34,584 ಸಕ್ರಿಯ ಪ್ರಕರಣಗಳಿವೆ. ತಮಿಳುನಾಡಿನಲ್ಲಿ 3,536 ಪ್ರಕರಣಗಳು ವರದಿಯಾಗಿವೆ.

ಸೋಮವಾರ ಬೆಳಗ್ಗಿನ ವರೆಗೂ ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 55,722 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 579 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ, ಈವರೆಗೆ ಸೋಂಕು ತಗುಲಿದವರ ಸಂಖ್ಯೆ 75,50,273ಕ್ಕೆ ಏರಿಕೆಯಾಗಿದೆ. 1,14,610 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 66,63,608 ಮಂದಿ ಚೇತರಿಸಿಕೊಂಡಿದ್ದು, ಸದ್ಯ 7,72,055 ಸಕ್ರಿಯ ಪ್ರಕರಣಗಳಿವೆ.

ಅಕ್ಟೋಬರ್ 18ರ ವರೆಗೆ 9.50 ಕೋಟಿಗೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಭಾನುವಾರ 8,59,786 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT