ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 18,552 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 5 ಲಕ್ಷ ದಾಟಿದೆ.
ಒಂದೇ ದಿನ 384 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಒಟ್ಟು 5,08,953 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು 15,685ಕ್ಕೆ ಏರಿಕೆಯಾಗಿದೆ. ಸದ್ಯ 1,97,387 ಸಕ್ರಿಯ ಪ್ರಕರಣಗಳಿದ್ದು, 2,95,881 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜೂನ್ 26ರ ವರೆಗೂ 79,96,707 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2,20,479 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
— #IndiaFightsCorona (@COVIDNewsByMIB) June 27, 2020
ತೀವ್ರ ಕೋವಿಡ್-19 ಹೊಡೆತಕ್ಕೆ ಒಳಗಾಗಿರುವ ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 1,52,765 ಪ್ರಕರಣಗಳು ದಾಖಲಾಗಿದ್ದು, 65,844 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ 79,815 ಮಂದಿ ಗುಣಮುಖರಾಗಿದ್ದು, 7,106 ಜನರು ಮೃತರಾಗಿದ್ದಾರೆ.
ದೆಹಲಿಯಲ್ಲಿ ಒಟ್ಟಾರೆ 77,240 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 27,657 ಸಕ್ರಿಯ ಪ್ರಕರಣಗಳಿದ್ದು, 47,091 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 2,492 ಮಂದಿ ಮೃತಪಟ್ಟಿದ್ದಾರೆ.