ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯ ರಫೇಲ್‌ ಗೇಟ್: ಖರ್ಗೆ ಕುಟುಕು

ಯುದ್ಧ ವಿಮಾನ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ ಆರೋಪ: ಎನ್‌ಡಿಎ ವಿರುದ್ಧ ಒಟ್ಟಾದ ವಿಪಕ್ಷಗಳು
Last Updated 10 ಆಗಸ್ಟ್ 2018, 19:28 IST
ಅಕ್ಷರ ಗಾತ್ರ

ನವದೆಹಲಿ : ರಫೇಲ್‌ ಒಪ್ಪಂದದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಬಿಜೆಪಿಯ ಕೆಲವು ಮುಖಂಡರೇ ಆರೋಪಿಸಿದ ನಂತರ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿವೆ.

ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.ಪ್ರತಿಭಟನೆ ತೀವ್ರವಾದ ಕಾರಣ ಎರಡೂ ಸದನಗಳಲ್ಲಿ ಕಲಾಪವನ್ನು ಮುಂದೂಡಲಾಯಿತು.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರಫೇಲ್ ವಿಚಾರವನ್ನು ಪ್ರಸ್ತಾಪಿಸಿದರು. ‘ಈ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ. ಇದು ಮೋದಿಯ ರಫೇಲ್ ಗೇಟ್. ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ರಚಿಸಬೇಕು. ಆ ಸಮಿತಿಯು ರಫೇಲ್ ಒಪ್ಪಂದದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಉಳಿದ ಸದಸ್ಯರೂ ಖರ್ಗೆ ಅವರಿಗೆ ದನಿಗೂಡಿಸಿದರು. ಜತೆಗೆ ‘ಮೋದಿಯ ರಫೇಲ್ ಗೇಟ್’ ಎಂಬ ಬರಹವಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಸದನದಲ್ಲಿ ಕೋರಂ ಇಲ್ಲ. ಹೀಗಿದ್ದೂ ಕಲಾಪ ನಡೆಸುವುದು ಸದನದ ಮೌಲ್ಯಗಳಿಗೆ ವಿರುದ್ಧವಾದುದು. ಹೀಗಾಗಿ ನಾವು ಹೊರನಡೆಯುತ್ತಿದ್ದೇವೆ’ ಎಂದು ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಹೊರನಡೆದರು.

ಹೊರಗೆ ಸೋನಿಯಾ ನೇತೃತ್ವದಲ್ಲಿ ಪ್ರತಿಭಟನೆ:ರಫೇಲ್‌ ಒಪ್ಪಂದದ ತನಿಖೆಗೆ ಜೆಪಿಸಿ ರಚಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದ ಹೊರ ಆವರಣದಲ್ಲಿ, ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ನ ರಾಜ್ ಬಬ್ಬರ್, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಅಂಬಿಕಾ ಸೋನಿ, ಸಿಪಿಐನ ಡಿ.ರಾಜಾ, ಎಎಪಿಯ ಸುಶೀಲ್ ಗುಪ್ತಾ ಕೂಡ ಭಾಗಿಯಾದರು.

ಚರ್ಚೆಗೆ ಬಾರದ ತಲಾಕ್: ತ್ರಿವಳಿ ತಲಾಕ್ ಅನ್ನು ನಿಷೇಧಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ’ಯು ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಇಂದು ಮುಂಗಾರು ಅಧಿವೇಷನ ಮುಗಿದಿರುವುದರಿಂದ ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಚರ್ಚೆಗೆ ಬರುವ ಸಾಧ್ಯತೆ ಇದೆ.
**
ರಫೇಲ್ ಗುತ್ತಿಗೆಯನ್ನು ನನಗೇ ನೀಡಿ...
‘ರಫೇಲ್ ಯುದ್ಧವಿಮಾನ ತಯಾರಿಕೆಯ ಗುತ್ತಿಗೆಯನ್ನು ನನಗೇ ನೀಡಿ’ ಎಂದು ಕಾಂಗ್ರೆಸ್‌ನ ಸಂಸದ್ ಸುನಿಲ್ ಜಖಾರ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿ ಮಾಡಿದ್ದಾರೆ. ‘ವಿಮಾನ ತಯಾರಿಕೆಯಲ್ಲಿ ನನಗೆ ಅನುಭವವಿದೆ. ಹೀಗಾಗಿ ಗುತ್ತಿಗೆಯನ್ನು ನನಗೇ ನೀಡಬೇಕು’ ಎಂದು ಅವರು ಪಟ್ಟು ಹಿಡಿದಿದ್ದಾರೆ.

‘ಮೇಡಂ ನಾನು ತಯಾರಿಸಿರುವ ರಫೇಲ್ ಯುದ್ಧವಿಮಾನದ ಪ್ರತಿಕೃತಿ
ಯನ್ನು ಸದನದಲ್ಲಿ ಪ್ರದರ್ಶಿಸಲು ಅನುಮತಿ ನೀಡಿ. ನಿನ್ನೆ ರಾತ್ರಿಯಿಂದ ವಿಮಾನದ ಪ್ರತಿರೂಪ ತಯಾರಿಸುವ ಅಭ್ಯಾಸ ಮಾಡುತ್ತಿದ್ದೇನೆ. ಹೀಗಾಗಿ ಯುದ್ಧವಿಮಾನ ತಯಾರಿಕೆಯಲ್ಲಿ ನನಗೆ ಅನುಭವವಿದೆ. ಅನುಭವವೇ ಇಲ್ಲದ ಉದ್ಯಮಿ ನಿರ್ಮಿಸುವುದಕ್ಕಿಂತ ಚೆನ್ನಾಗಿರುವ ರಫೇಲ್ ಅನ್ನು ನಾನು ನಿರ್ಮಿಸುತ್ತೇನೆ. ಹೀಗಾಗಿ ಗುತ್ತಿಗೆಯನ್ನು ನನಗೇ ನೀಡಬೇಕು’ ಎಂದು ಸುನಿಲ್ ಲೋಕಸಭೆಯಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೆ ತಾವು ಕಾಗದದಲ್ಲಿ ನಿರ್ಮಿಸಿದ್ದ ರಫೇಲ್‌ ಪ್ರತಿಕೃತಿಯನ್ನೂ ಅವರು ಸದನದಲ್ಲಿ ಪ್ರದರ್ಶಿಸಿದರು. ಯುದ್ಧವಿಮಾನ ತಯಾರಿಕೆಯಲ್ಲಿ ಅನುಭವವೇ ಇಲ್ಲದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ರಫೇಲ್ ಯುದ್ಧವಿಮಾನಗಳ ತಯಾರಿಕೆಯ ಗುತ್ತಿಗೆ ನೀಡಿರುವುದನ್ನು ಪ್ರಶ್ನಿಸಿ ಅವರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಪರಿ ಇದು.

**
ಮೋದಿ ಜಾದು: ರಾಹುಲ್ ಲೇವಡಿ

‘ಒಂದು ರಫೇಲ್ ಯುದ್ಧವಿಮಾನಕ್ಕೆ ₹ 526 ಕೋಟಿಯಂತೆ ಯುಪಿಎ ಸರ್ಕಾರ ಒಪ್ಪಂದವನ್ನು ಸಿದ್ಧಪಡಿಸಿತ್ತು. ಆದರೆ ಮೋದಿಯವರು ಜಾದೂ ಮಾಡಿ ಪ್ರತಿ ವಿಮಾನದ ಬೆಲೆಯನ್ನು ₹ 1,600 ಕೋಟಿ ಮಾಡಿಬಿಟ್ಟರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಲೇವಡಿ ಮಾಡಿದರು.

ರಾಯಪುರದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಸರ್ಕಾರ ಒಪ್ಪಂದವನ್ನು ಸಿದ್ಧವಾಗಿರಿಸಿತ್ತು. ಮೋದಿಯವರು ಅದಕ್ಕೆ ಸಹಿ ಮಾಡಬೇಕಿತ್ತಷ್ಟೆ. ಆದರೆ ಮೋದಿಯವರು ಫ್ರಾನ್ಸ್‌ಗೆ ಪ್ರವಾಸ ಹೋದರು. ಹಳೆಯ ಒಪ್ಪಂದವನ್ನು ರದ್ದು ಮಾಡಿ, ಹೊಸ ಒಪ್ಪಂದ ಮಾಡಿಕೊಂಡರು. ಅವರ ಸಚಿವ ಸಂಪುಟದ ಸದಸ್ಯರಿಗೇ ಈ ವಿಷಯ ಗೊತ್ತಿರಲಿಲ್ಲ’ ಎಂದು ರಾಹುಲ್ ಆರೋಪಿಸಿದರು.

‘ನೋಡಿ, ಎಚ್‌ಎಎಲ್‌ಗೆ ವಿಮಾನ ತಯಾರಿಕೆಯ ಗುತ್ತಿಗೆ ನೀಡಲು ಒಪ್ಪಿಕೊಳ್ಳಲಾಗಿತ್ತು. ಆದರೆ ಈ ಒಪ್ಪಂದದಲ್ಲಿ ಗುತ್ತಿಗೆಯನ್ನು ಎಚ್‌ಎಎಲ್‌ನಿಂದ ಕಿತ್ತುಕೊಂಡು ಖಾಸಗಿ ಕಂಪನಿಗೆ ನೀಡಲಾಯಿತು. ಆ ಕಂಪನಿಯೋ ಈವರೆಗೆ ಒಂದೂ ವಿಮಾನವನ್ನು ತಯಾರಿಸಿಲ್ಲ’ ಎಂದೂ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT