ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಅಡಿ ನೀರು ಹರಿಸಲು CWRC ಶಿಫಾರಸು

Published 11 ಜುಲೈ 2024, 10:56 IST
Last Updated 11 ಜುಲೈ 2024, 19:23 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ರಾಜ್ಯವು ಜುಲೈ 12ರಿಂದ 31ರ ವರೆಗೆ ಪ್ರತಿದಿನ 1 ಟಿಎಂಸಿ ಅಡಿ (11,500 ಕ್ಯುಸೆಕ್‌) ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಶಿಫಾರಸು ಮಾಡಿದೆ. 

ನವದೆಹಲಿಯಲ್ಲಿ ಗುರುವಾರ ನಡೆದ ಸಮಿತಿಯ 99ನೇ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಭಾಗಿಯಾದರು. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ ಸಂಚಿತ ನೀರಿನ ಹರಿವು ಪ್ರಮಾಣ 1 ಟಿಎಂಸಿ ಇರಲೇಬೇಕು ಎಂದು ಸಮಿತಿ ಸ್ಪಷ್ಟಪಡಿಸಿತು. ಜುಲೈ 31ರ ವರೆಗೆ ಕರ್ನಾಟಕವು ಒಟ್ಟು 20 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ. 

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ನೀರಿನ ಒಟ್ಟು ಸಂಗ್ರಹಣ ಪ್ರಮಾಣ 114 ಟಿಎಂಸಿ ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 45 ಟಿಎಂಸಿ ನೀರಿತ್ತು. ಈಗ 70.90 ಟಿಎಂಸಿ ಅಡಿ ನೀರು ಲಭ್ಯವಿದೆ. ಈ ಜಲಾಶಯಗಳಿಗೆ ಗುರುವಾರ ಒಳಹರಿವಿನ ಪ್ರಮಾಣ 18,892 ಕ್ಯುಸೆಕ್‌ ಹಾಗೂ ಹೊರಹರಿವು 6,972 ಕ್ಯುಸೆಕ್. 

ಕರ್ನಾಟಕದ ವಾದವೇನು?: 

ರಾಜ್ಯದ ನಾಲ್ಕು ಜಲಾಶಯಗಳಿಗೆ ಜೂನ್‌ 1ರಿಂದ ಜುಲೈ 9ರವರೆಗೆ 41.65 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಆದರೆ, ಒಳಹರಿವಿನ ಕೊರತೆ ಶೇ 28.71ರಷ್ಟಿದೆ. ಸದ್ಯ ಈ ಜಲಾಶಯಗಳಲ್ಲಿ 58.66 ಟಿಎಂಸಿ ಅಡಿ ನೀರಿದೆ. ಮೆಟ್ಟೂರಿನಿಂದ 4.90 ಟಿಎಂಸಿ ಅಡಿ ಮತ್ತು ಭವಾನಿಯಿಂದ 0.61 ಟಿಎಂಸಿ ಅಡಿ ನೀರನ್ನು (ಒಟ್ಟು 5.542 ಟಿಎಂಸಿ ಅಡಿ) ನದಿಗೆ ಹರಿಸಲಾಗಿದ್ದು, ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.70 ಟಿಎಂಸಿ ಅಡಿ ನೀರಿದೆ. ನೀರು ಹರಿಸುವುದಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25ರವರೆಗೆ ಕಾಯುವುದು ಸೂಕ್ತ. ಬಳಿಕ, ವಸ್ತುಸ್ಥಿತಿಯನ್ನು ಪರಿಶೀಲಿಸಿ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು. 

ತಮಿಳುನಾಡು ಬೇಡಿಕೆಯೇನು?: 

ಹಿಂದಿನ ಜಲ ವರ್ಷದಲ್ಲಿ ಫೆಬ್ರುವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ಪರಿಸರದ ಹರಿವಿನ ನೀರನ್ನೂ ಹರಿಸಿಲ್ಲ. ಪ್ರಸಕ್ತ ಜಲ ವರ್ಷದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ಮಾರ್ಪಡಿಸಿದ ಕಾವೇರಿ ಜಲವಿವಾದ ನ್ಯಾಯಮಂಡಳಿ ಆದೇಶದ ಪ್ರಕಾರ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT