ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.4ರಂದು ಆಂಧ್ರ, ಒಡಿಶಾ, ಪ.ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸುವ ಭೀತಿ

Last Updated 30 ನವೆಂಬರ್ 2021, 20:06 IST
ಅಕ್ಷರ ಗಾತ್ರ

ನವದೆಹಲಿ: ‘ಡಿಸೆಂಬರ್‌ 4ರಂದು ಬೆಳಿಗ್ಗೆ ಆಂಧ್ರ ಪ್ರದೇಶ, ಒಡಿಶಾದ ಕರಾವಳಿ ಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.

‘ಅಂಡಮಾನ್‌ ನಿಕೋಬಾರ್‌ಗೆ ಹೊಂದಿಕೊಂಡಂತಿರುವ ದಕ್ಷಿಣ ಥಾಯ್ಲೆಂಡ್‌ ಸಮುದ್ರದಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದ್ದು, ಇದರ ಪರಿಣಾಮ ಮುಂದಿನ 12 ಗಂಟೆಗಳಲ್ಲಿ ಅಂಡಮಾನ್‌ ನಿಕೋಬಾರ್‌ನಲ್ಲೂ ಕಡಿಮೆ ಒತ್ತಡ ಸೃಷ್ಟಿಯಾಗಲಿದೆ. ಇದು ಆಗ್ನೇಯ ಮತ್ತು ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ. ಇದರಿಂದಾಗಿ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಚಂಡಮಾರುತವು ತೀವ್ರಗೊಳ್ಳಲಿದೆ’ ಎಂದು ಇಲಾಖೆ ಹೇಳಿದೆ.

‘ಡಿ.4ರಂದು ಬೆಳಿಗ್ಗೆ ಚಂಡಮಾರುತವು ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳನ್ನು ತಲುಪಲಿದೆ. ಇದರಿಂದಾಗಿ ಒಡಿಶಾದ ಹಲವೆಡೆ, ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು, ಆಂಧ್ರಪ್ರದೇಶದ ಉತ್ತರ ಕರಾವಳಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಮುನ್ಸೂಚನೆ ನೀಡಿದೆ.

ಡಿ.5 ಮತ್ತು 6ರಂದು ಈಶಾನ್ಯ ರಾಜ್ಯಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಫಸಲು ರಕ್ಷಣೆಗೆ ಸೂಚನೆ

ಮುಂದಿನ ವಾರದಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಒಡಿಶಾ ಸರ್ಕಾರವು ಫಸಲು ರಕ್ಷಣೆ ಆದ್ಯತೆ ನೀಡಿದೆ. ಭತ್ತದ ಕೊಯ್ಲನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT