ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ದಲಿತ ವ್ಯಕ್ತಿ ಥಳಿಸಿ ಹತ್ಯೆ, 8 ಮಂದಿ ಬಂಧನ

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ
Published 27 ಆಗಸ್ಟ್ 2023, 11:34 IST
Last Updated 27 ಆಗಸ್ಟ್ 2023, 11:34 IST
ಅಕ್ಷರ ಗಾತ್ರ

ಭೋಪಾಲ್‌/ಸಾಗರ್‌ (ಪಿಟಿಐ): ಹಳೆ ವೈಷಮ್ಯದ ಕಾರಣಕ್ಕೆ ಗುಂಪೊಂದು ದಲಿತ ವ್ಯಕ್ತಿಯನ್ನು ಥಳಿಸಿ ಕೊಂದಿರುವ ಪ್ರಕರಣ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಈ ಘಟನೆಯು ಗುರುವಾರ ನಡೆದಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಬೊರೋದಿಯಾ ನೋನಾಗಿರ್‌ ಗ್ರಾಮದ ನಿವಾಸಿ ನಿತಿನ್‌ ಆಹಿರ್‌ವಾರ್‌ ಎಂದು ಗುರುತಿಸಲಾಗಿದೆ. ಆತನ ವಯಸ್ಸನ್ನು 18ರಿಂದ 20 ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಮಂದಿ ಗುರುತು ಪತ್ತೆ ಆದ ಮತ್ತು ಮೂರರಿಂದ ನಾಲ್ಕು ಮಂದಿ ಗುರುತು ಪತ್ತೆ ಆಗದ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 307 (ಕೊಲೆ ಯತ್ನ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಎಸ್‌ಪಿ ಸಂಜೀವ್‌ ಉಯ್ಕೆ ತಿಳಿಸಿದ್ದಾರೆ.

ಪೊಲೀಸರ ದಾಖಲೆಗಳ ಪ್ರಕಾರ ಸುಲಿಗೆ, ಥಳಿತ ಮತ್ತು ಕಳುವಿಗೆ ಸಂಬಂಧಿಸಿ ನಿತಿನ್‌ ವಿರುದ್ಧ ಸುಮಾರು ಏಳು ಮೊಕದ್ದಮೆಗಳಿದ್ದವು. ಈ ಆರೋಪಿತ ಘಟನೆಯು ಹಳೆ ವೈಷಮ್ಯದ ಕಾರಣಕ್ಕೆ ನಡೆದಿದೆ ಎಂದಿದ್ದಾರೆ.

ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಆಕ್ಷೇಪಿಸಿದ ನಿತಿನ್‌ ಕುಟುಂಬ ಸದಸ್ಯರು, ಆತನ ಅಂತಿಮ ಸಂಸ್ಕಾರ ನೆರವೇರಿಸಲು ಮೊದಲಿಗೆ ನಿರಾಕರಿಸಿದರು. ಬಳಿಕ, ಸರ್ಕಾರದ ಯೋಜನೆಗಳ ಉಪಲಬ್ಧತೆ ದೊರಕುವಂತೆ ಮಾಡುವುದಾಗಿ ಜಿಲ್ಲಾಧಿಕಾರಿ ಅವರು ಭರವಸೆ ನೀಡಿದ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಿದರು ಎಂದು ಎಎಸ್‌ಪಿ ತಿಳಿಸಿದ್ದಾರೆ.

‘ಆರೋಪಿಗಳ ವಿರುದ್ಧ ನಾಲ್ಕು ವರ್ಷಗಳ ಕೆಳಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದೆ. ಪ್ರಕರಣವನ್ನು ಹಿಂಪಡೆಯುವಂತೆ ನನ್ನ ಸಹೋದರನ ಮೇಲೆ ಅವರು ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ’ಎಂದು ಸಂತ್ರಸ್ತನ ಸಹೋದರಿ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಎಸ್‌ಪಿ, ಸಂತ್ರಸ್ತನ ಸಹೋದರಿಯು 2019ರಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಹೇಳಿದ್ದಾರೆ.

- ‘ಮಧ್ಯಪ್ರದೇಶ ದೌರ್ಜನ್ಯಗಳ ಪ್ರಯೋಗಾಲಯ’

 ‘ಬಿಜೆಪಿಯು ಮಧ್ಯಪ್ರದೇಶವನ್ನು ದಲಿತರ ಮೇಲಿನ ದೌರ್ಜನ್ಯಗಳ ಪ್ರಯೋಗಾಲಯವನ್ನಾಗಿ ಮಾಡಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ.

ಮಧ್ಯಪ್ರದೇಶದ ಸಾಗರ್‌ನಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಪ್ರಕರಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ‘ಎಕ್ಸ್‌’ ವೇದಿಕೆಯಲ್ಲಿ ಅವರು ಹೀಗೆ ಪೋ‌ಸ್ಟ್‌ ಮಾಡಿದ್ದಾರೆ. ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.  ‘ರಾಜ್ಯದಲ್ಲಿ ದಲಿತ ಯುವಕನನ್ನು ಹತ್ಯೆಗೈಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತೋರಿಕೆಗಾಗಿ ಮಾತ್ರ ಸಾಗರ್‌ನಲ್ಲಿ ಸಂತ ರವಿದಾಸ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಆದರೆ ಮಧ್ಯಪ್ರದೇಶದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗಗಳ ವಿರುದ್ಧ ನಡೆಯುತ್ತಿರುವ ಅಪರಾಧಗಳ ಕುರಿತು ಅವರಿಗೆ ಸ್ವಲ್ಪವೂ ಹಿಂಜರಿಕೆ ಇಲ್ಲ’ ಎಂದಿದ್ದಾರೆ.

ದಲಿತರ ವಿರುದ್ಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ನಡೆಯುತ್ತಿವೆ. ದೌರ್ಜನ್ಯದ ದರವು ದೇಶದ ಒಟ್ಟು ಸರಾಸರಿಗಿಂತ ರಾಜ್ಯದಲ್ಲಿ ಮೂರು ಪಟ್ಟು ಹೆಚ್ಚು ಇದೆ ಎಂದು ಖರ್ಗೆ ಹೇಳಿದ್ದಾರೆ.   ‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಜನರು ಬಿಜೆಪಿಯನ್ನು ಚುನಾಯಿಸುವುದಿಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾಗಿರುವವರು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದ್ದಾರೆ. 

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್‌ ಹಿರಿಯ ನಾಯಕ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಸೇರಿ ಹಲವು ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ. ಬಿಜೆಪಿ ಪ್ರತಿಕ್ರಿಯೆ: ಪ್ರಕರಣಕ್ಕೆ ಸಂಬಂಧಸಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದೂ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ನ ಇತರ ಸದಸ್ಯರು ಅಪರಾಧಗಳ ಕುರಿತು ಪಕ್ಷಪಾತದ ಧೋರಣೆಯನ್ನೇಕೆ ಅನುಸರಿಸುತ್ತಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT