ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ಸಾಲದಿಂದ ದೇಶದ ಮೇಲೆ ಪರಿಣಾಮ: ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ವಿವರಣೆ

ಸಾಲ ಪಡೆಯುವುದರ ಮೇಲೆ ಮಿತಿ ಹೇರಿರುವ ಕ್ರಮ ಕುರಿತು ಕೇಂದ್ರದ ವಿವರಣೆ
Published 7 ಫೆಬ್ರುವರಿ 2024, 14:18 IST
Last Updated 7 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯಗಳ ಅನಿಯಂತ್ರಿತ ಸಾಲ ಪಡೆಯುವ ಕ್ರಮವು ಇಡೀ ದೇಶದ ಸಾಲದ ಶ್ರೇಯಾಂಕದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿವರಿಸಿದೆ.

ಕೇರಳ ಸರ್ಕಾರ ಪಡೆಯಬಹುದಾದ ಸಾಲದ ಮೊತ್ತದ ಮೇಲೆ ಮಿತಿ ವಿಧಿಸಿರುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರವು ಈ ವಿವರಣೆ ನೀಡಿದೆ. ಸಾರ್ವಜನಿಕ ಹಣಕಾಸು ನಿರ್ವಹಣೆಯು ರಾಷ್ಟ್ರೀಯ ವಿಚಾರ ಎಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ವಿವರಣೆಯಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಹೇಳಿದ್ದಾರೆ.

‘ಕೇರಳ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯಲ್ಲೇ ಹಲವು ಸಮಸ್ಯೆಗಳಿವೆ. ಅನುತ್ಪಾದಕ ವೆಚ್ಚಗಳಿಗೆ ಅಥವಾ ಸರಿಯಾದ ಗುರಿ ಇಲ್ಲದ ಸಬ್ಸಿಡಿಗಳಿಗೆ ಹಣ ಹೊಂದಿಸಲು ರಾಜ್ಯವು ಅನಿಯಂತ್ರಿತವಾಗಿ ಸಾಲ ಮಾಡುತ್ತಿದ್ದರೆ, ಹಣಕಾಸು ಮಾರುಕಟ್ಟೆಯಿಂದ ಸಾಲ ಪಡೆಯುವುದಕ್ಕೆ ಖಾಸಗಿಯವರಿಗೂ ತೊಂದರೆ ಉಂಟಾಗುತ್ತದೆ’ ಎಂದು ಕೇಂದ್ರ ತಿಳಿಸಿದೆ.

‘ರಾಜ್ಯಗಳು ಮಾಡುವ ಸಾಲವು ದೇಶದ ಸಾಲದ ಶ್ರೇಯಾಂಕದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಸಾಲ ತೀರಿಸುವಲ್ಲಿ ಯಾವುದೇ ರಾಜ್ಯ ವಿಫಲವಾದಲ್ಲಿ ವಿಶ್ವಾಸಾರ್ಹತೆಗೆ ಪೆಟ್ಟು ಬೀಳುತ್ತದೆ. ಅದರಿಂದಾಗಿ ಇಡೀ ದೇಶದ ಹಣಕಾಸಿನ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ವೆಂಕಟರಮಣಿ ಅವರು ಹೇಳಿದ್ದಾರೆ.

ಅನಿಯಂತ್ರಿತವಾಗಿ ಸಾಲ ಮಾಡುವುದರಿಂದ ಖಾಸಗಿ ಉದ್ದಿಮೆಗಳು ಪಡೆಯುವ ಸಾಲ ಕೂಡ ದುಬಾರಿ ಆಗುತ್ತದೆ. ಆಗ ಮಾರುಕಟ್ಟೆಯಲ್ಲಿ ಸರಕುಗಳ ಉತ್ಪಾದನೆ, ಪೂರೈಕೆ ಹಾಗೂ ಸೇವೆಗಳ ಲಭ್ಯತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಅಟಾರ್ನಿ ಜನರಲ್ ನೀಡಿರುವ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.

‘ರಾಜ್ಯವು ವಿಪರೀತವಾಗಿ ಸಾಲ ಮಾಡಿ, ಅದನ್ನು ತೀರಿಸಲು ತೆಗೆದಿರಿಸಬೇಕಾದ ಮೊತ್ತ ಹೆಚ್ಚಾದಾಗ ಅಭಿವೃದ್ಧಿ ಕಾರ್ಯಗಳಿಗೆ ಸಿಗುವ ಮೊತ್ತವು ಕಡಿಮೆ ಆಗುತ್ತದೆ. ಇದು ಜನರನ್ನು ದಾರಿದ್ರ್ಯಕ್ಕೆ ನೂಕುತ್ತದೆ, ರಾಜ್ಯದ ವರಮಾನ ತಗ್ಗುತ್ತದೆ. ಆ ಮೂಲಕ ರಾಷ್ಟ್ರದ ವರಮಾನ ಕೂಡ ಕಡಿಮೆ ಆಗುತ್ತದೆ. ಆಗ ಸಾಮಾಜಿಕವಾಗಿಯೂ ಹಲವು ಸಮಸ್ಯೆಗಳು ಉಂಟಾಗಬಹುದು’ ಎಂದು ವಿವರಣೆಯಲ್ಲಿ ಹೇಳಲಾಗಿದೆ.

ಯಾವುದೇ ಮೂಲದಿಂದ ಸಾಲ ಪಡೆಯಲು ಪ್ರತಿ ರಾಜ್ಯವೂ ಕೇಂದ್ರದಿಂದ ಅನುಮತಿ ಪಡೆದುಕೊಳ್ಳಲೇಬೇಕು ಎಂದು ವೆಂಕಟರಮಣಿ ಅವರು ತಿಳಿಸಿದ್ದಾರೆ.

ರಾಜ್ಯಗಳಿಗೆ ಸಾಲ ಪಡೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇಡೀ ದೇಶದ ಆರ್ಥಿಕ ಸ್ಥಿರತೆಯನ್ನು ಗಮನದಲ್ಲಿ ಇರಿಸಿಕೊಂಡಿರುತ್ತದೆ. ತಾರತಮ್ಯ ಇಲ್ಲದ ರೀತಿಯಲ್ಲಿ, ಪಾರದರ್ಶಕವಾಗಿ, ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಸಾಲ ಪಡೆಯುವ ಮಿತಿಯನ್ನು ನಿರ್ಧರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಕೇರಳದ ವಾದ ಹೀಗಿದೆ: 

ರಾಜ್ಯದ ಹಣಕಾಸಿನ ನಿರ್ವಹಣೆಯು ಸ್ವಾಯತ್ತ ಅಧಿಕಾರ, ಆ ಅಧಿಕಾರಕ್ಕೆ ಮಿತಿಗಳನ್ನು ಹೇರುವಂತೆ ಇಲ್ಲ. ಆದರೆ ಕೇಂದ್ರ ಸರ್ಕಾರವು ಸಾಲ ಪಡೆಯುವುದರ ಮೇಲೆ ಮಿತಿ ಹೇರಿ ಈ ಅಧಿಕಾರದ ವಿಚಾರವಾಗಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಕೇರಳ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ. ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಸಂವಿಧಾನವು ರಾಜ್ಯಗಳಿಗೆ ಹಣಕಾಸಿನ ಸ್ವಾಯತ್ತೆಯನ್ನು ನೀಡಿದೆ. ರಾಜ್ಯಗಳ ಸಾಲದ ಮಿತಿ ಎಷ್ಟಿರಬೇಕು ಎಂಬುದನ್ನು ರಾಜ್ಯ ಸರ್ಕಾರ ರೂಪಿಸುವ ಕಾನೂನು ತೀರ್ಮಾನಿಸಬೇಕು ಎಂದು ಕೇರಳ ಸರ್ಕಾರವು ಅರ್ಜಿಯಲ್ಲಿ ಹೇಳಿದೆ. ಕೇಂದ್ರದ ಕ್ರಮವು ಒಕ್ಕೂಟ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT