ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್‌ ಹಿತಾಸಕ್ತಿಗಾಗಿ ಬಿಜೆಪಿ ಸೇರುತ್ತಿದ್ದೇನೆ: ಮಾಜಿ ಸಿಎಂ ಚಂಪೈ ಸೊರೇನ್‌

ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಹೇಳಿಕೆ
Published : 28 ಆಗಸ್ಟ್ 2024, 14:51 IST
Last Updated : 28 ಆಗಸ್ಟ್ 2024, 14:51 IST
ಫಾಲೋ ಮಾಡಿ
Comments

ರಾಂಚಿ: ‘ಜಾರ್ಖಂಡ್‌ನ ಹಿತಾಸಕ್ತಿಗಾಗಿ ನಾನು ಬಿಜೆಪಿಯನ್ನು ಸೇರುವ ನಿರ್ಧಾರ ತೆಗೆದುಕೊಂಡಿದ್ದೇನೆ. ಜೆಎಂಎಂ ಪಕ್ಷಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಹೇಳಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಚಂಪೈ ಅವರು, ತಮ್ಮ ಪುತ್ರನೊಂದಿಗೆ ಬುಧವಾರ ರಾಂಚಿಗೆ ಮರಳಿದರು. ಈ ವೇಳೆ ಅವರ ಅನೇಕ ಬೆಂಬಲಿಗರು ಅವರನ್ನು ಸ್ವಾಗತಿಸಿದರು. 

ತಾವು ಬಿಜೆಪಿ ಸೇರುವ ನಿರ್ಧಾರದ ಕುರಿತು ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ಚಂಪೈ, ‘ರಾಜ್ಯದ ಸಂತಾಲ್‌ ಪರಗಣ ಪ್ರದೇಶದಲ್ಲಿ ಬಾಂಗ್ಲಾದೇಶದಿಂದ ಭಾರಿ ಸಂಖ್ಯೆಯಲ್ಲಿ ನುಸುಳುಕೋರರು ಬರುತ್ತಿದ್ದಾರೆ. ಈ ಅತಿಕ್ರಮಣಕಾರರು ಸ್ಥಳೀಯ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಹಾನಿಯನ್ನುಂಟು ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿನ ಬುಡಕಟ್ಟು ಸಮುದಾಯದ ಅಸ್ಮಿತೆಯನ್ನು ಉಳಿಸಲು ನಾನು ಬಿಜೆಪಿ ಸೇರುತ್ತಿದ್ದೇನೆ’ ಎಂದಿದ್ದರು. 

ಅಲ್ಲದೇ, ‘ಪಾಕುರ್‌ ಮತ್ತು ರಾಜಮಹಲ್‌ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನುಸುಳುಕೋರರ ಸಂಖ್ಯೆ ಸ್ಥಳೀಯ ಬುಡಕಟ್ಟು ಸಮುದಾಯದ ಜನಸಂಖ್ಯೆಗಿಂತ ಹೆಚ್ಚಾಗಿದೆ. ಬಿಜೆಪಿ ಮಾತ್ರವೇ ಈ ವಿಚಾರದಲ್ಲಿ ಗಂಭೀರವಾಗಿದೆ. ಮತಬ್ಯಾಂಕ್‌ ರಾಜಕಾರಣಕ್ಕಾಗಿ ಇತರ ಪಕ್ಷಗಳು ಈ ವಿಚಾರವನ್ನು ಕಡೆಗಣಿಸುತ್ತಿವೆ’ ಎಂದು ಹೇಳಿದ್ದರು.  

ಆ.30ರಂದು ರಾಂಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಂಪೈ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಬಿಜೆಪಿ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. 

ಕಳೆದ ಫೆ.2ರಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗ, ಚಂಪೈ ಸೊರೇನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 

‘5 ತಿಂಗಳಿನಿಂದ ಚಂಪೈ ಪೊಲೀಸ್‌ ಕಣ್ಗಾವಲಿನಲ್ಲಿ’

‘ಕಳೆದ ಐದು ತಿಂಗಳಿನಿಂದ ಚಂಪೈ ಸೊರೇನ್‌ ಅವರು ತಮ್ಮದೇ ಸರ್ಕಾರದ ಪೊಲೀಸರ ಕಣ್ಗಾವಲಿನಲ್ಲಿದ್ದಾರೆ. ಚಂಪೈ ಅವರು ಬಿಜೆಪಿಯನ್ನು ಸಂಪರ್ಕಿಸುವ ಮುನ್ನವೇ ಅವರನ್ನು ಕಣ್ಗಾವಲಿನಲ್ಲಿಡಲಾಗಿತ್ತು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.  ‘ಜಾರ್ಖಂಡ್‌ನ ವಿಶೇಷ ವಿಭಾಗದ ಇಬ್ಬರು ಎಸ್‌ಐಗಳು ದೆಹಲಿಯ ಹೋಟೆಲ್‌ನಲ್ಲಿ ಚಂಪೈ ಅವರ ಮೇಲೆ ನಿಗಾ ಇಟ್ಟಿದ್ದರು. ಆಗ ಚಂಪೈ ಅವರ ಬೆಂಬಲಿಗರು ಆ ಇಬ್ಬರು ಪೊಲೀಸರನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದು ಭಾರತೀಯ ರಾಜಕೀಯದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದೆ’ ಎಂದರು.   ‘ಸಂವಿಧಾನಕ್ಕೆ ರಕ್ಷಣೆ ನೀಡಬೇಕಿದೆ ಎಂದು ಮಾತನಾಡುವ ಕಾಂಗ್ರೆಸ್‌ ಮತ್ತು ಜೆಎಂಎಂ ಪಕ್ಷಗಳು ಮಾಜಿ ಮುಖ್ಯಮಂತ್ರಿ ಮತ್ತು ಸಚಿವರೊಬ್ಬರನ್ನು ಹೀಗೆ ಕಣ್ಗಾವಲಿನಲ್ಲಿ ಇಟ್ಟಿವೆ. ಇದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಉಲ್ಲಂಘನೆಯಾಗಿದೆ’ ಎಂದು ಕಿಡಿಕಾರಿದರು.  ಅಲ್ಲದೇ ‘ಸೊರೇನ್‌ ಅವರನ್ನು ಹಿಂಬಾಲಿಸಲು ಸಾಂವಿಧಾನಿಕ ಹುದ್ದೆಯಲ್ಲಿರುವ ಓರ್ವ ವ್ಯಕ್ತಿ ಮತ್ತು ವಿಶೇಷ ದಳದ ಮುಖ್ಯಸ್ಥರು ತಮಗೆ ಆದೇಶಿಸಿದ್ದಾರೆ ಎಂದು ಎಸ್‌ಐಗಳು ತಿಳಿಸಿದರು. ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯೊಬ್ಬರು ಇಬ್ಬರು ಎಸ್‌ಐಗಳನ್ನು ಭೇಟಿ ಮಾಡುತ್ತಿದ್ದರು. ಹೀಗಾಗಿ ಚಂಪೈ ಅವರ ಮೊಬೈಲ್‌ ಕದ್ದಾಲಿಕೆ ಆಗಿದ್ದಿರಬಹುದು ಮತ್ತು ಅವರನ್ನು ‘ಹನಿಟ್ರ್ಯಾಪ್‌’ಗೆ ಸಿಲುಕಿಸುವ ಯೋಜನೆಯೂ ಇದ್ದಿರಬಹುದು’ ಎಂದು ಹಿಮಂತ ಆರೋಪಿಸಿದರು.  ಈ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಂಪೈ ‘ಯಾವುದೇ ಪರಿಸ್ಥಿತಿಗೂ ನಾನು ಹೆದರುವುದಿಲ್ಲ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT