ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆಗಿನ ರಕ್ಷಣಾ ಸಂಬಂಧ ಉತ್ತಮ: ರಷ್ಯಾ

Last Updated 21 ಡಿಸೆಂಬರ್ 2020, 21:13 IST
ಅಕ್ಷರ ಗಾತ್ರ

ನವದೆಹಲಿ: ನಿರ್ಬಂಧ ವಿಧಿಸುವ ಅಮೆರಿಕದ ಬೆದರಿಕೆಯ ನಡುವೆಯೂ ಭಾರತದ ಜತೆಗಿನ ರಕ್ಷಣಾ ವ್ಯವಹಾರ ಸಂಬಂಧ ಉತ್ತಮವಾಗಿ ಮುಂದುವರಿಯುತ್ತಿದೆ ಎಂದು ರಷ್ಯಾ ತಿಳಿಸಿದೆ.

ಎಸ್‌–400 ಕ್ಷಿಪಣಿ ಸೇರಿದಂತೆ ರಕ್ಷಣಾ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಭಾರತದ ಜತೆ ಮಾತುಕತೆ ಸೌಹಾರ್ದಯುತ ವಾತಾವಾರಣದಲ್ಲಿ ನಡೆಯುತ್ತಿದೆ ಎಂದು ಹೇಳಿದೆ.

ಸೋಮವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ರಾಯಭಾರಿ ನಿಕೋಲಾಯ್‌ ಕುಡ್‌ಶೆವ್‌, ‘ಏಕಪಕ್ಷೀಯವಾಗಿ ಯಾವುದೇ ದೇಶದ ಮೇಲೆ ನಿರ್ಬಂಧಗಳನ್ನು ಹೇರುವುದನ್ನು ರಷ್ಯಾ ಒಪ್ಪಿಕೊಳ್ಳುವುದಿಲ್ಲ. ನಿರ್ಬಂಧ ಹೇರುವುದನ್ನೇ ಒಂದು ಸಾಧನವನ್ನಾಗಿ ಮಾಡಿಕೊಳ್ಳಬಾರದು’ ಎಂದು ಹೇಳಿದರು.

ಎಸ್‌–400 ಕ್ಷಿಪಣಿಗಳನ್ನು ಖರೀದಿಸಿದ ಟರ್ಕಿ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಯಾವುದೇ ದೇಶದ ಮೇಲೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಜಾರಿಗೊಳಿಸಿರುವ ನಿಯಮಗಳನ್ನು ಹೊರತುಪಡಿಸಿ ಇತರ ಯಾವುದೇ ರೀತಿಯ ನಿರ್ಬಂಧ ವಿಧಿಸುವುದು ಸಮರ್ಪವಲ್ಲ’ ಎಂದರು.

ಬೆಂಗಳೂರಿನಲ್ಲಿ 2021ರಲ್ಲಿ ನಡೆಯಲಿರುವ ಏರೋ ಇಂಡಿಯಾದಲ್ಲಿ ರಷ್ಯಾ, ಎಸ್‌ಯು–57, ಎಸ್‌ಯು–35, ಮಿಗ್‌–35 ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಾಗುವುದು ಎಂದು ಕುಡ್‌ಶೆವ್‌ ತಿಳಿಸಿದ್ದಾರೆ.

ಐದು ಎಸ್‌–400 ಕ್ಷಿಪಣಿಗಳನ್ನು ಖರೀದಿಸಲು 2018ರ ಅಕ್ಟೋಬರ್‌ನಲ್ಲಿ ರಷ್ಯಾ ಜತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಒಪ್ಪಂದವನ್ನು ಜಾರಿಗೊಳಿಸಿದರೆ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ಅಮೆರಿಕ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT