ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಳವಾಗಿರುವ ವಾಯುಮಾಲಿನ್ಯವು ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸ್ವಲ್ಪ ಪ್ರಮಾಣದಲ್ಲಿ ತಗ್ಗಬಹುದು. ಆದರೂ ಇಂದು (ಭಾನುವಾರ) ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’ಯಾಗಿಯೇ ಇದೆ ಎಂದು ಪರಿವೀಕ್ಷಣಾ ಏಜೆನ್ಸಿ ಹೇಳಿದೆ.
ಭಾನುವಾರ ಬೆಳಿಗ್ಗೆ 9 ವಾಯು ಗುಣಮಟ್ಟ ಸೂಚ್ಯಂಕ 385 ಇದೆ. ಶನಿವಾರ 389, ಶುಕ್ರವಾರ 415 ಇತ್ತು. ಎರಡು ದಿನಗಳಿಗೆ ಹೊಲಿಸಿದರೆ ಇಂದು ತುಸು ಸುಧಾರಣೆ ಕಂಡಿದೆ. ಆದರೂ ಕಳಪೆ ಹಂತದಲ್ಲಿಯೇ ಇದೆ.
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಹೊರಸೂಸುವಿಕೆಯಿಂದ ವಾಯುಮಾಲಿನ್ಯ
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡಲು ದೆಹಲಿ– ಎನ್‌ಸಿಆರ್‌ನಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಹೊರಸೂಸುವಿಕೆಯೇ ವಾಯು ಮಾಲಿನ್ಯವನ್ನು ಉಲ್ಬಣಗೊಳಿಸುತ್ತಿವೆ ಎಂದು ಹೊಸ ವಿಶ್ಲೇಷಣೆಯೊಂದು ಹೇಳಿದೆ.
ದೆಹಲಿ-ಎನ್‌ಸಿಆರ್‌ನಲ್ಲಿರುವ 11 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ ಹೊರಸೂಸುತ್ತವೆ. ಇದು ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡಲು ಕಾರಣ ಎಂದು ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗೆ ಕೇಂದ್ರ ವಿದ್ಯುತ್ ಸಚಿವಾಲಯದ ತಾಂತ್ರಿಕ ವಿಭಾಗವಾದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ (CEA) ವೆಬ್‌ಸೈಟ್‌ನಿಂದ ಪಡೆದ ಪರಿಸರ ಸ್ಥಿತಿಯ ವರದಿಗಳನ್ನು ಆಧರಿಸಿದೆ ಎಂದು ಹೇಳಲಾಗಿದೆ.