ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಭ್ರಷ್ಟಾಚಾರ ಪ್ರಕರಣದಲ್ಲಿ BRS ನಾಯಕಿ ಕವಿತಾ ಬಂಧನ

Published 15 ಮಾರ್ಚ್ 2024, 14:07 IST
Last Updated 15 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಹೈದರಾಬಾದ್‌: ಬಿಆರ್‌ಎಸ್‌ ನಾಯಕಿ ಹಾಗೂ ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್‌ಗೆ ಭೇಟಿ ಕೊಟ್ಟು ರೋಡ್‌ಶೋ ನಡೆಸಿದ್ದಾರೆ. ಅದರ ಬೆನ್ನಿಗೇ ಬಿಆರ್‌ಎಸ್‌ ವರಿಷ್ಠ ಕೆ.ಚಂದ್ರಶೇಖರ್‌ ರಾವ್‌ ಪುತ್ರಿ ಕವಿತಾ ಅವರ ಬಂಧನವಾಗಿದೆ. ಇದು ಬಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

‘ಕವಿತಾ ಅವರ ಬಂಧನ ಕಾನೂನುಬಾಹಿರ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ಯರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಲು ಬಿಜೆಪಿ ಹೆಣೆದಿರುವ ರಾಜಕೀಯ ಪಿತೂರಿಯ ಭಾಗವಾಗಿದೆ’ ಎಂದು ಬಿಆರ್‌ಎಸ್‌ ಆರೋಪಿಸಿದೆ.

ಹೈದರಾಬಾದ್‌ನಲ್ಲಿರುವ ಕವಿತಾ ಅವರ ನಿವಾಸದಲ್ಲಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಿಗ್ಗೆ ಶೋಧ ನಡೆಸಿ, ನಂತರ ಅವರನ್ನು ಬಂಧಿಸಿದರು ಎಂದು ಇ.ಡಿ ಮೂಲಗಳು ಹೇಳಿವೆ.

5–6 ಗಂಟೆಗಳ ಕಾಲ ಶೋಧ ನಡೆಸಿದ ನಂತರ, ಇ.ಡಿ ಅಧಿಕಾರಿಗಳು ಬಂಧನ ವಾರಂಟ್ ಜಾರಿ ಮಾಡಿ, ಕವಿತಾ ಅವರನ್ನು ವಶಕ್ಕೆ ಪಡೆದರು.

ಕವಿತಾ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಶೋಧಕ್ಕೆ ಮುಂದಾದ ಸಂದರ್ಭದಲ್ಲಿ, ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಕವಿತಾ ಅವರ ಸಹೋದರ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್‌, ಕುಟುಂಬದ ಸದಸ್ಯರು ಹಾಗೂ ಬಿಆರ್‌ಎಸ್‌ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರಲ್ಲದೇ, ಇ.ಡಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

‘ಪ್ರಕರಣಕ್ಕೆ ಸಂಬಂಧಿಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಲ್ಲದೇ, ಪ್ರಯಾಣದ ವಾರಂಟ್‌ ಹಾಜರುಪಡಿಸದೇ ಕವಿತಾ ಅವರನ್ನು ಹೇಗೆ ಬಂಧಿಸುತ್ತೀರಿ’ ಎಂದು ಕೆ.ಟಿ.ರಾಮ ರಾವ್, ಇ.ಡಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರಲ್ಲದೇ, ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೆಹಲಿ ಅಬಕಾರಿ ನೀತಿ ಜಾರಿಗೊಂಡಿದ್ದ ಸಂದರ್ಭದಲ್ಲಿ 2021–22ನೇ ಸಾಲಿನಲ್ಲಿ ಮದ್ಯ ಮಾರಾಟಗಾರರ ಪರ ‘ಸೌಥ್‌ ಗ್ರೂಪ್‌’ ಲಾಬಿ ನಡೆಸಿತ್ತು. ‘ಸೌಥ್‌ ಗ್ರೂಪ್‌’ ಮೇಲೆ ಶರತ್‌ ರೆಡ್ಡಿ, ಕವಿತಾ ಹಾಗೂ ಮಾಗುಂಟ ಶ್ರೀನಿವಾಸುಲು ರೆಡ್ಡಿ ನಿಯಂತ್ರಣ ಹೊಂದಿದ್ದಾರೆ. ಈ ಹಗರಣದ ಆರೋಪಿಗಳಲ್ಲೊಬ್ಬರಾದ ವಿಜಯ್ ನಾಯರ್‌, ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕರ ಪರವಾಗಿ ಈ ಸಂಸ್ಥೆಯಿಂದ ಕನಿಷ್ಠ ₹100 ಕೋಟಿಯಷ್ಟು ಲಂಚ ಪಡೆದಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ಕವಿತಾ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಗೆ ಹಾಜರಾಗುವಂತೆ ಇ.ಡಿ ಹಲವು ಬಾರಿ ಸಮನ್ಸ್‌ ಜಾರಿ ಮಾಡಿತ್ತು. ತಮ್ಮ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂಬ ಕಾರಣ ನೀಡಿ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಕವಿತಾ ಅವರ ಬಂಧನ ಕಾನೂನುಬಾಹಿರ. ಈ ಕ್ರಮದ ವಿರುದ್ಧ ನಾವು ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೋರಾಟ ನಡೆಸುತ್ತೇವೆ
ಟಿ.ಹರೀಶ್‌ ರಾವ್, ಬಿಆರ್‌ಎಸ್‌ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT