ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್‌ ಅನುಮತಿ

Published 6 ಜುಲೈ 2024, 13:31 IST
Last Updated 6 ಜುಲೈ 2024, 13:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರೂಣದ ಬೆಳವಣಿಗೆಯಲ್ಲಿ ನ್ಯೂನತೆ ಇರುವುದರಿಂದ, 31 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ. 

ಭ್ರೂಣದ ನರಗಳ ಬೆಳವಣಿಗೆಯಲ್ಲಿ ತೊಂದರೆ ಕಾಣಿಸಿರುವುದರಿಂದ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರಿ 31 ವರ್ಷದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್‌ ನರೂಲಾ ಅವರು ಶನಿವಾರ ತೀರ್ಪು ನೀಡಿದರು.

ಭ್ರೂಣದ ಬೆಳವಣಿಗೆಯಲ್ಲಿ ತೀವ್ರ ತೆರನಾದ ಅಸಹಜತೆಗಳಿದ್ದರೆ, ಅಂತಹ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಕಾನೂನು ಬಲವಂತಪಡಿಸುವುದಿಲ್ಲ ಎಂದು ಹೈಕೋರ್ಟ್‌ ತನ್ನ ಅದೇಶದಲ್ಲಿ ಹೇಳಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನೀಡಿದ ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದ ಪೀಠ, ನರ ಸಂಬಂಧಿ ನ್ಯೂನತೆಗಳೊಂದಿಗೆ ಮಗು ಜನಿಸಿದರೆ, ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ತಿಳಿಸಿತು.

‘ಅರ್ಜಿದಾರ ಮಹಿಳೆಯ ಮೊದಲ ಮಗು, ನರ ಸಂಬಂಧಿ ನ್ಯೂನತೆಯಿಂದೆ ಬಳಲುತ್ತಿದೆ. ಇದೀಗ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಮಹಿಳೆ ಮತ್ತು ಅವರ ಕುಟುಂಬವು ನರ ಸಂಬಂಧಿ ಸಮಸ್ಯೆಗಳಿರುವ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಒತ್ತಡಕ್ಕೆ ಸಿಲುಕುತ್ತದೆ’ ಎಂದು ಅಭಿಪ್ರಾಯಪಟ್ಟಿತು. 

ಇಲ್ಲಿನ ಲೋಕನಾಯಕ ಆಸ್ಪತ್ರೆಯ ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಮಹಿಳೆಯು ಜೂನ್‌ 13 ರಂದು ಹೈಕೋರ್ಟ್‌ ಮೊರೆ ಹೋಗಿದ್ದರು. ಮಹಿಳೆ ಮತ್ತು ಆಕೆಯ ಗರ್ಭವನ್ನು ತಪಾಸಣೆಗೆ ಒಳಪಡಿಸಲು ಲೋಕನಾಯಕ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಒಳಗೊಂಡ ಮಂಡಳಿಯನ್ನು ಹೈಕೋರ್ಟ್‌ ರಚಿಸಿತ್ತು. ಆದರೆ ಆ ವೈದ್ಯರ ಮಂಡಳಿ ನೀಡಿದ ವರದಿ ‘ಅಪೂರ್ಣ’ ಎಂಬುದನ್ನು ಮನಗಂಡ ಹೈಕೋರ್ಟ್‌, ಜುಲೈ 1 ರಂದು ಏಮ್ಸ್‌ನ ವೈದ್ಯರನ್ನು ಒಳಗೊಂಡ ಮಂಡಳಿಯನ್ನು ರಚಿಸಿತ್ತು. ಏಮ್ಸ್‌ ವೈದ್ಯರ ತಂಡ ನೀಡಿದ ವರದಿಯನ್ನು ಆಧರಿಸಿ ಗರ್ಭಪಾತಕ್ಕೆ ಅನುಮತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT