ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ತುಳುಕುತ್ತಿದೆ ಜೈಲುಗಳು; ವಿಚಾರಣಾಧೀನ ಕೈದಿಗಳ ಪರ ಸಲ್ಲಿಕೆಯಾದ PIL ವಜಾ

Published 26 ಏಪ್ರಿಲ್ 2024, 14:04 IST
Last Updated 26 ಏಪ್ರಿಲ್ 2024, 14:04 IST
ಅಕ್ಷರ ಗಾತ್ರ

ನವದೆಹಲಿ: ಜೈಲಿನೊಳಗೆ ಕೈದಿಗಳ ಸಂಖ್ಯೆ ಹೆಚ್ಚಳವಾಗಿದ್ದು, ದಟ್ಟಣೆ ನಿಯಂತ್ರಿಸಲು ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಹಂಗಾಮಿ ಮುಖ್ಯನ್ಯಾಯಮೂರ್ತಿ ಮನಮೋಹನ್ ಅವರ ನೇತೃತ್ವದ ಪೀಠದ ಎದುರು ಗೌತಮ್ ಕುಮಾರ್ ಲ್ಹಾ ಅವರು ಅರ್ಜಿ ಸಲ್ಲಿಸಿದರು. ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅದನ್ನು ಮತ್ತೊಮ್ಮೆ ಪುರಸ್ಕರಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಸ್ಥಳಾವಕಾಶವಿಲ್ಲದೆ ತುಂಬಿ ತುಳುಕುತ್ತಿರುವ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಹಿತಕ್ಕಾಗಿ ಈ ಅರ್ಜಿ ಸಲ್ಲಿಕೆಯಾಗಿದೆ. ಸಮಿತಿಯೊಂದನ್ನು ರಚಿಸಿ, ಕನಿಷ್ಠ ತಿಂಗಳಿಗೆ ಒಂದು ಸಭೆಯನ್ನಾದರೂ ನಡೆಸುವ ಮೂಲಕ ವಿಚಾರಣೆ ಎದುರಿಸುತ್ತಿರುವ ಕೈದಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಬಹುದು’ ಎಂದು ಆದರೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

‘ದೆಹಲಿಯಲ್ಲಿ ಒಟ್ಟು ಮೂರು ಜೈಲು ಆವರಣಗಳಿವೆ. ಇಲ್ಲಿನ ಒಟ್ಟು ಸಾಮರ್ಥ್ಯ 10,026 ಕೈದಿಗಳು. ಆದರೆ 2021ರ ಮಾಹಿತಿ ಪ್ರಕಾರ ಈ ಜೈಲುಗಳಲ್ಲಿ ಒಟ್ಟು 19,500 ಕೈದಿಗಳಿದ್ದಾರೆ. ಇವರಲ್ಲಿ ವಿಚಾರಣಾಧೀನ ಕೈದಿಗಳ ಪ್ರಮಾಣ ಶೇ 83.33ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು’ ಎಂದು ಅರ್ಜಿದಾರರು ವಾದ ಮಂಡಿಸಿದರು.

‘ಪ್ರಕರಣಗಳ ಕುರಿತ ಆರೋಪ ಪಟ್ಟಿ ಸಲ್ಲಿಸುವ ಪ್ರಮಾಣ ದೆಹಲಿಯಲ್ಲಿ ಶೇ 31ರಷ್ಟು ಮಾತ್ರ ಇದೆ. ಒಟ್ಟು ದಾಖಲಾಗುವ ಎಫ್‌ಐಆರ್‌ಗೆ ನಿಗದಿತ ಸಮಯದಲ್ಲಿ ಸಲ್ಲಿಸಬೇಕಾದ ಆರೋಪ ಪಟ್ಟಿಯು ರಾಷ್ಟ್ರೀಯ ಸರಾಸರಿ ಶೇ 73ರಷ್ಟಿದೆ. ಇದು ವಿಚಾರಣಾಧೀನ ಕೈದಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಕೇಂದ್ರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ‘ಈ ವಿಷಯ ಕುರಿತಾದ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಅನ್ನೇ ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT