ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಗ್ನಿ ದುರಂತ: ಆಸ್ಪತ್ರೆ ಎದುರು ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Published 26 ಮೇ 2024, 16:01 IST
Last Updated 26 ಮೇ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ವಿವೇಕ್‌ ವಿಹಾರ್‌ ಪ್ರದೇಶದ ಬೇಬಿ ಕೇರ್ ನ್ಯೂಬಾರ್ನ್ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ನವಜಾತ ಶಿಶುಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಂಕಿಗೆ ಆಹುತಿಯಾಗಿರುವ ತಮ್ಮ ಪುಟಾಣಿ ಕೂಸುಗಳನ್ನು ಗುರುತಿಸಲು ಕುಟುಂಬಗಳ ಸದಸ್ಯರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಶಿಶುಗಳ ಸಾವಿನ ಆಘಾತಕ್ಕೆ ಒಳಗಾಗಿರುವ ಪೋಷಕರ ರೋದನೆ ಮನ ಕಲಕುತ್ತಿತ್ತು. 

‘ನನ್ನ ಮಗಳು ಅಲ್ಲಾಗೆ ಇಷ್ಟವಾಗಿ ಬಿಟ್ಟಳೆ’ ಎಂದು ಕಣ್ಣೀರು ಹಾಕುತ್ತಿದ್ದ ತಂದೆಯೊಬ್ಬರು, ತನ್ನ 11 ದಿನಗಳ ಕಂದಮ್ಮನಿಗಾಗಿ ಪರಿತಪಿಸುತ್ತಿದ್ದರು. ಮಗಳ ದೇಹವನ್ನು ಇಲ್ಲಿಯವರೆಗೆ ಗುರುತಿಸಲು ಸಾಧ್ಯವಾಗದಿದ್ದಕ್ಕೆ ಅವರ ದುಃಖ ಹೆಚ್ಚಾಗಿತ್ತು.

‘ಮೇ 15ರಂದು ಬೇರೊಂದು ಆಸ್ಪತ್ರೆಯಲ್ಲಿ ಜನಿಸಿದ ನನ್ನ ಮಗಳನ್ನು ಈ ಆಸ್ಪತ್ರೆಯಲ್ಲಿ 72 ಗಂಟೆಗಳ ಕಾಲ ವೀಕ್ಷಣೆಗೆ ಇರಿಸುವಂತೆ ಸೂಚಿಸಲಾಗಿತ್ತು. ಇಲ್ಲಿ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗಳು ಈಗ ಇಲ್ಲವಾಗಿದ್ದಾಳೆ’ ಎಂದು ಅವರು ರೋದಿಸಿದರು.

ಈ ದುರಂತದಲ್ಲಿ ಮೃತಪಟ್ಟಿರುವ ಮತ್ತೊಂದು ಶಿಶು ರೂಹಿ. ಅದು ಜನಿಸಿ 17 ದಿನಗಳಾಗಿತ್ತು. ‘ನಿನ್ನೆಯಷ್ಟೇ ಮಗುವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೆ. ಆದರೆ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬೆಂಕಿ ಬಿದ್ದಿರುವ ವಿಷಯ ತಿಳಿಯಿತು. ಕೂಡಲೇ ಇಲ್ಲಿಗೆ ಬಂದೆವು. ಮಗಳನ್ನು ಗುರುತಿಸುವುದೇ ಕಷ್ಟವಾಗಿದೆ’ ಎಂದು ಶಿಶುವಿನ ತಾಯಿ ಕಣ್ಣೀರು ಹಾಕಿದರು. 

‘ಮಗಳ ಆರೋಗ್ಯ ಸುಧಾರಿಸಲಿ ಎಂದು ಈ ಆಸ್ಪತ್ರೆಗೆ ಸೇರಿಸಿದೆವು. ಆದರೆ ಆಸ್ಪತ್ರೆಯೇ ನಮ್ಮ ಏಕೈಕ ಮಗುವನ್ನು ಕಸಿದುಕೊಳ್ಳುತ್ತದೆ ಎಂದು ತಿಳಿದಿರಲಿಲ್ಲ’ ಎಂದರು.

ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆ ಕಾನೂನುಬದ್ಧವೊ, ಅಲ್ಲವೊ ಎಂಬುದೂ ತಿಳಿಯುತ್ತಿಲ್ಲ. ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿದೆಯೊ ಇಲ್ಲವೊ ಎಂಬುದೂ ಗೊತ್ತಿಲ್ಲ. ಈ ಪ್ರಶ್ನೆಗಳಿಗೆ ಯಾರೊಬ್ಬರೂ ಉತ್ತರಿಸುತ್ತಿಲ್ಲ ಎಂದು ಹೃತಿಕ್‌ ಚೌಧರಿ ಎಂಬುವರು ಪ್ರತಿಕ್ರಿಯಿಸಿದರು. ಈ ದುರಂತದಲ್ಲಿ ಚೌಧರಿ ಅವರ ನವಜಾತ ಶಿಶು ಸಹ ಮೃತಪಟ್ಟಿದೆ.

ಘಟನೆಯ ಬಳಿಕ ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಶುಗಳನ್ನು ಕಳೆದುಕೊಂಡಿದ್ದ ಪೋಷಕರು ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT