ನವದೆಹಲಿ: ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದ ಅಲ್–ಖೈದಾ ಘಟಕವನ್ನು ಬೇಧಿಸಿದ್ದು, ಜಾರ್ಖಂಡ್, ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ 14 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿ ಆಧರಿಸಿ, ಆಯಾಯ ರಾಜ್ಯದ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಜಾರ್ಖಂಡ್‌ನ ರಾಂಚಿಯ ಡಾ.ಇಶ್ತಿಯಾಕ್ ನೇತೃತ್ವದಲ್ಲಿ ಅಲ್ ಖೈದಾ ಘಟಕವು ಕಾರ್ಯಾಚರಣೆ ನಡೆಸುತ್ತಿದ್ದು, ದೇಶದ ಒಳಗಡೆ ಗಂಭೀರವಾದ ಭಯೋತ್ಪಾದಕ ಕೃತ್ಯವೆಸಗಿ ‘ಖಿಲಾಫತ್’ ಘೋಷಿಸುವ ಉದ್ದೇಶ ಹೊಂದಿದ್ದರು’ ಎಂದು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಭಯೋತ್ಪಾದನಾ ಘಟಕದ ಸದಸ್ಯರಿಗೆ ದೇಶದ ವಿವಿಧ ಭಾಗಗಳಲ್ಲಿ ಶಸ್ತ್ರಾಸ್ತ್ರಗಳ ನಿರ್ವಹಣೆಯ ತರಬೇತಿಯನ್ನು ನೀಡಲಾಗಿತ್ತು. ಇವರಲ್ಲಿ ಆರು ಮಂದಿಯನ್ನು ರಾಜಸ್ಥಾನದ ಭಿವಂಡಿ ಹಾಗೂ ಉಳಿದ 8 ಮಂದಿಯನ್ನು ಜಾರ್ಖಂಡ್, ರಾಜಸ್ಥಾನದಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.