ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Delhi Heatwave: ಗರಿಷ್ಠ ಉಷ್ಣಾಂಶಕ್ಕೆ ದೆಹಲಿ ತತ್ತರ

ಮುಂಗೇಶಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ದಾಖಲು
ಪ್ರಜಾವಾಣಿ ವಾರ್ತೆ/ಪಿಟಿಐ
Published 30 ಮೇ 2024, 0:09 IST
Last Updated 30 ಮೇ 2024, 0:09 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮುಂಗೇಶಪುರದಲ್ಲಿ ಬುಧವಾರ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ದೆಹಲಿಯ ವಾಯುವ್ಯ ಭಾಗದಲ್ಲಿರುವ ಹವಾಮಾನ ಕೇಂದ್ರದಲ್ಲಿ ಮಂಗಳವಾರ 49.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬುಧವಾರ ಸಂಜೆ ಇದೇ ಕೇಂದ್ರದಲ್ಲಿ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ದೆಹಲಿಯಲ್ಲಿ ದಾಖಲಾಗಿರುವ ಈವರೆಗಿನ ಗರಿಷ್ಠ ತಾಪಮಾನ ಎಂದು ಹೇಳಲಾಗುತ್ತಿದೆ. 

ಬೇಸಿಗೆಯ ಕಾರಣದಿಂದಾಗಿ ದೆಹಲಿಯಲ್ಲಿ ಈಗಾಗಲೇ ಬಿಸಿ ವಾತಾವರಣವಿದೆ. ಇದರ ಜೊತೆಗೆ, ರಾಜಸ್ಥಾನದಿಂದ ಬೀಸುವ ಬಿಸಿ ಗಾಳಿಯು ಮೊದಲಿಗೆ ದೆಹಲಿ ನಗರದ ಹೊರವಲಯದಲ್ಲಿರುವ ಮುಂಗೇಶಪುರ, ನರೆಲಾ ಮತ್ತು ನಜಾಫಗಢ ಪ್ರದೇಶಗಳಿಗೆ ತಟ್ಟುತ್ತದೆ. ಇದರಿಂದ ಈ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ವಿವರಿಸಿದ್ದಾರೆ.

ಹೆಚ್ಚಿದ ವಿದ್ಯುತ್‌ ಬೇಡಿಕೆ:

ತಾಪಮಾನದ ಹೆಚ್ಚಳದಿಂದಾಗಿ ದೇಶದ ರಾಜಧಾನಿಯಲ್ಲಿ ವಿದ್ಯುತ್ ಬೇಡಿಕೆಯೂ ಹೆಚ್ಚಿದೆ. ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ 8,302 ಮೆಗಾವಾಟ್‌ನಷ್ಟು ವಿದ್ಯುತ್ ಬೇಡಿಕೆ ಕಂಡುಬಂದಿತು. ಈ ಮೂಲಕ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯ ಇತಿಹಾಸದಲ್ಲಿ ವಿದ್ಯುತ್ ಬೇಡಿಕೆ 8,300 ಮೆಗಾವಾಟ್ ದಾಟಿದೆ ಎಂದು ಡಿಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಬೇಸಿಗೆ ಅವಧಿಯಲ್ಲಿ 8,200 ಮೆಗಾವಾಟ್ ವಿದ್ಯುತ್ ಬೇಡಿಕೆ ಗರಿಷ್ಠ ಎಂದು ಡಿಸ್ಕಾಂ ಅಂದಾಜಿಸಿತ್ತು. 

ದತ್ತಾಂಶ ಪರಿಶೀಲನೆಗೆ ತಂಡ ನಿಯೋಜನೆ:

ರಾಜಧಾನಿಯ ಇತರ ಪ್ರದೇಶಗಳಿಗೆ ಹೋಲಿಸಿದರೆ ಮುಂಗೇಶಪುರದ ತಾಪಮಾನ ಅಸಹಜವಾಗಿ ಕಾಣುತ್ತಿದೆ. ಹೀಗಾಗಿ ಅಲ್ಲಿನ ದತ್ತಾಂಶವನ್ನು ಪರಿಶೀಲಿಸಲು ತಂಡವನ್ನು ಕಳುಹಿಸಲಾಗಿದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ್‌ ಮಹಾಪಾತ್ರ ತಿಳಿಸಿದ್ದಾರೆ.

‘ದೆಹಲಿ ಎನ್‌ಸಿಆರ್‌ ವಿವಿಧ ಭಾಗಗಳಲ್ಲಿ 45.2 ಡಿಗ್ರಿಗಳಿಂದ 49.1 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ. ಮುಂಗೇಶಪುರದಲ್ಲಿ 52.9 ಡಿಗ್ರಿ ದಾಖಲಾಗಿದೆ. ಇದು ಬಹುಶಃ ಸೆನ್ಸರ್‌ ಅಥವಾ ಇತರ ಸ್ಥಳೀಯ ದೋಷದಿಂದ ಆಗಿರಬಹುದು. ಈ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಹಾರದ ಔರಂಗಾಬಾದ್‌, ಉತ್ತರ ಪ್ರದೇಶದ ಕಾನ್ಪುರ, ಪ್ರಯಾಗ್‌ರಾಜ್‌, ಆಗ್ರಾ, ಹರಿಯಾಣದ ರೋಹ್ಟಕ್‌, ನರ್ನಾಲ್‌, ಸಿರ್ಸಾ, ಪಂಜಾಬಿನ ಭಠಿಂಡಾದಲ್ಲಿ 48 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಹರಿಯಾಣದ ಮಹೇಂದ್ರಗಢದಲ್ಲಿ 49.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT