ಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಶುಕ್ರವಾರ ಇಲ್ಲಿನ ಶಂಕರಾಚಾರ್ಯ ಬೆಟ್ಟದಲ್ಲಿರುವ ಜ್ಯೇಷ್ಠೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಮಳೆಯ ನಡುವೆಯೇ ದೇವರು, ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸರ ನೆರವಿನಿಂದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದ ಮಾಜಿ ಪ್ರಧಾನಿ ಅವರು, ‘ನನ್ನನ್ನು ಇಲ್ಲಿಗೆ ಶಿವನೇ ಕರೆಸಿಕೊಂಡಿದ್ದಾನೆ. ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣವಾಗಿದ್ದು, ಶಿವ ದರ್ಶನದಿಂದ ಧನ್ಯನಾಗಿದ್ದೇನೆ’ ಎಂದು ಭಾವುಕರಾದರು.
‘ಇಲ್ಲಿಗೆ ಭೇಟಿ ನೀಡಿ, ಶಿವನ ದರ್ಶನ ಪಡೆಯಬೇಕು ಎಂಬುದು ಜೀವಮಾನದ ಆಸೆಯಾಗಿತ್ತು. ಅದು ಇಂದು ನೆರವೇರಿದೆ’ ಎಂದು ಅವರು ಹೇಳಿದರು. ಈ ವೇಳೆ ಮಾಜಿ ಪ್ರಧಾನಿಯವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಗುರುವಾರ ಭೇಟಿ ನೀಡಿದ್ದ ದೇವೇಗೌಡರು, ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲು ಆಗಲಿಲ್ಲ. ಮುಂದಿನ ಮಾರ್ಚ್‌ನಲ್ಲಿ ಪುನಃ ಇಲ್ಲಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದರು.