ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | 21 ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧೆ

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಚೆನ್ನೈ: ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೆ ಮಾತುಕತೆಯನ್ನು ಮುಕ್ತಾಯಗೊಳಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು, ಲೋಕಸಭಾ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಾದ ಕೊಯಮತ್ತೂರು, ತೂತುಕುಡಿ ಮತ್ತು ಚೆನ್ನೈನ ಮೂರು ಕ್ಷೇತ್ರಗಳನ್ನು ಡಿಎಂಕೆ ತನಗೇ ಉಳಿಸಿಕೊಂಡಿದೆ.

ರಾಜ್ಯದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ದ ಎರಡನೇ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ ತಿರುವಳ್ಳೂರು, ಕೃಷ್ಣಗಿರಿ, ಕರೂರ್, ಶಿವಗಂಗಾ, ವಿರುಧುನಗರ್‌, ಕನ್ಯಾಕುಮಾರಿ ಮತ್ತು ಪುದುಚೇರಿ ಕ್ಷೇತ್ರಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ. ಜೊತೆಗೆ, ಕಡಲೂರ್‌, ಮಯಿಲಾದುತುರೈ ಮತ್ತು ತಿರುನೆಲ್ವೇಲಿ ಕ್ಷೇತ್ರಗಳನ್ನು ಪಡೆದುಕೊಂಡಿದೆ. ಆದರೆ ಅರಣಿ, ಥೇಣಿ ಮತ್ತು ತಿರುಚಿರಾಪಳ್ಳಿ ಕ್ಷೇತ್ರಗಳನ್ನು ಈ ಬಾರಿ ಕಳೆದುಕೊಂಡಿದೆ.

ತನ್ನ ಸ್ವಂತ ಚಿಹ್ನೆಯೊಂದಿಗೆ ಈ ಬಾರಿ ಕಣಕ್ಕಿಳಿಯಲಿರುವ ವೈಕೋ ನೇತೃತ್ವದ ಎಂಡಿಎಂಕೆಗೆ ತಿರುಚಿರಾಪಳ್ಳಿಯನ್ನು ಬಿಟ್ಟುಕೊಡಲಾಗಿದೆ.   

2014ರ ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಕೊಯಮತ್ತೂರಿನಲ್ಲಿ ಡಿಎಂಕೆ ಸ್ಪರ್ಧಿಸುತ್ತಿದೆ. ಈ ಕ್ಷೇತ್ರದಲ್ಲಿ 2014ರಲ್ಲಿ ಸೋತ ಬಳಿಕ ಕಾಂಗ್ರೆಸ್‌ಗೆ ಈ ಕ್ಷೇತ್ರವನ್ನು ಡಿಎಂಕೆ  ಬಿಟ್ಟುಕೊಟ್ಟಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಕನಿಮೊಳಿ ಕರುಣಾನಿಧಿ ಅವರು ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿ ತೆಲಂಗಾಣ ರಾಜ್ಯಪಾಲರಾಗಿದ್ದ ತಮಿಳ್‌ ಇಸೈ ಸೌಂದರ್‌ರಾಜನ್‌ ಅವರನ್ನು ಸೋಲಿಸಿದ್ದರು. ಈ ಬಾರಿಯೂ ಅವರು ಅದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.  

ಕಾಂಗ್ರೆಸ್‌ ತನ್ನ ಐವರು ಹಾಲಿ ಸಂಸದರಿಗೆ ಈ ಬಾರಿಯೂ ಟಿಕೆಟ್‌ ನೀಡುವ ನಿರೀಕ್ಷೆ ಇದೆ. ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ತಿರುವಳ್ಳೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶಿವಗಂಗಾ ಸಂಸದ ಕಾರ್ತಿ ಚಿದಂಬರ ಅವರು ಈ ಬಾರಿಯೂ ಅದೇ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT