ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕಕ್ಕೆ ಬೇಡಿಕೆ: ಗೀತಾ ಪ್ರೆಸ್‌ ವೆಬ್‌ಸೈಟ್‌ನಲ್ಲೂ ಸಿಗಲಿದೆ ರಾಮಚರಿತ ಮಾನಸ

Published 14 ಜನವರಿ 2024, 13:54 IST
Last Updated 14 ಜನವರಿ 2024, 13:54 IST
ಅಕ್ಷರ ಗಾತ್ರ

ಗೋರಖ್‌ಪುರ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ರಾಮಚರಿತ ಮಾನಸ ಪುಸ್ತಕಕ್ಕೆ ಬೇಡಿಕೆ ಹೆಚ್ಚಿದೆ. ಬೇಡಿಕೆ ಪೂರೈಸುವಷ್ಟು ಮುದ್ರಣ ಸಾಧ್ಯವಾಗದ ಕಾರಣ ಗೀತಾ ಪ್ರೆಸ್‌ ತಮ್ಮ ವೆಬ್‌ಸೈಟ್‌ನಿಂದ ರಾಮಚರಿತ ಮಾನಸವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ. 

2022ರಿಂದ ಸುಮಾರು 75 ಸಾವಿರ ರಾಮಚರಿತ ಮಾನಸ ಪುಸ್ತಕವನ್ನು ಗೀತಾ ಪ್ರೆಸ್‌ ಪ್ರಕಟಿಸಿದೆ. ಆದರೆ ರಾಮ ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ದಿನ ಘೋಷಣೆಯಾದಾಗಿನಿಂದ ಪುಸ್ತಕಕ್ಕೆ ಬೇಡಿಕೆ ಅಧಿಕವಾಗಿದೆ ಎಂದು ಗೀತಾ ಪ್ರೆಸ್‌ ಹೇಳಿದೆ.

ಪ್ರೆಸ್‌ನಲ್ಲಿ ಕಡಿಮೆ ಸ್ಥಳಾವಕಾಶ ಇರುವುದರಿಂದ ಮುದ್ರಣ ಮತ್ತು ವಿತರಣೆ ಸಾಧ್ಯವಾಗುತ್ತಿಲ್ಲ. ಒಂದೇ ಬಾರಿಗೆ  2 ರಿಂದ 4 ಲಕ್ಷ ಪುಸ್ತಕಗಳನ್ನು ಮುದ್ರಣ ಮಾಡುವಷ್ಟು ನಾವು ಸನ್ನದ್ಧರಾಗಿಲ್ಲ, ಆದರೂ 1 ಲಕ್ಷ ಪುಸ್ತಕಗಳನ್ನು ಮುದ್ರಣ ಮಾಡಿಕೊಡಲಾಗಿದೆ. ಇಷ್ಟಾದರೂ ಬೇಡಿಕೆ ಕಡಿಮೆಯಾಗಿಲ್ಲ. ಹೀಗಾಗಿ ಪುಸ್ತಕ ಸಂಗ್ರಹವಿಲ್ಲ ಎಂದು ಹೇಳಬೇಕಾಯಿತು. ಆದರೂ ಮಳಿಗೆಗಳಿಂದ ಕರೆ ಬರುತ್ತಿದೆ ಎಂದು ಗೀತಾ ಪ್ರೆಸ್‌ನ ವ್ಯವಸ್ಥಾಪಕ ಲಾಲ್‌ಮಣಿ ತ್ರಿಪಾಠಿ ಹೇಳಿದ್ದಾರೆ.

ಇದೀಗ ರಾಮಚರಿತ ಮಾನಸವನ್ನು ಗೀತಾ ಪ್ರೆಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಮಂಗಳವಾರದಿಂದ ಓದುಗರಿಗೆ ದೊರೆಯಲಿದ್ದು, ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. 15 ದಿನ ಲಭ್ಯವಿರಲಿದೆ. 50 ಸಾವಿರ ಜನ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಬೇಡಿಕೆ ಹೆಚ್ಚಿದರೆ ಡೌನ್‌ಲೋಡ್‌ ಸಾಮರ್ಥ್ಯವನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

1923ರಲ್ಲಿ ಆರಂಭವಾದ ಗೀತಾ ಪ್ರೆಸ್‌ ಜಗತ್ತಿನ ಅತಿದೊಡ್ಡ ಪ್ರಕಾಶನ ಸಂಸ್ಥೆಯಾಗಿದ್ದು, 15 ಭಾಷೆಗಳಲ್ಲಿ 95 ಕೋಟಿಗೂ ಹೆಚ್ಚು ಪುಸ್ತಕವನ್ನು ಪ್ರಕಟಿಸಿದೆ. ಕಳೆದ ವರ್ಷ ಈ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ಕೂಡ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT