ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಮತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಗಂಗೋಪಾಧ್ಯಾಯ ಪ್ರಚಾರಕ್ಕೆ ನಿರ್ಬಂಧ

Published 21 ಮೇ 2024, 11:28 IST
Last Updated 21 ಮೇ 2024, 11:28 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ ಅವರು 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಮಂಗಳವಾರ ನಿರ್ಬಂಧ ವಿಧಿಸಿದೆ. ಅಲ್ಲದೇ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದೆ.

ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಗಂಗೋಪಾಧ್ಯಾಯ, 'ಮಮತಾ ಬ್ಯಾನರ್ಜಿ ಅವರು ಮಹಿಳೆಯೇ? ನಾನು ಕೆಲವೊಮ್ಮೆ ಅಚ್ಚರಿ ಪಡುತ್ತೇನೆ' ಎಂದಿದ್ದರು.

ಗಂಗೋಪಾಧ್ಯಾಯ ಅವರು ನೀಡಿದ ಇಂತಹ ಅವಹೇಳನಕಾರಿ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

'ಗಂಗೋಪಾಧ್ಯಾಯ ಅವರ ಹೇಳಿಕೆ ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಅವಮಾನಿಸುವಂತಿದೆ. ಇಂತಹ ಹೇಳಿಕೆಯನ್ನು ಯಾವುದೇ ಮಹಿಳೆ ಅಥವಾ ಹಿರಿಯ ರಾಜಕೀಯ ನಾಯಕ ಮತ್ತು ಸಾಂವಿಧಾನಿಕ ಸ್ಥಾನದಲ್ಲಿರುವವರ ಬಗ್ಗೆ ಬಳಸಿದ್ದರೂ ಖಂಡನೀಯ. ಅಂತಹ ಅಸಹ್ಯಕರ ಮಾತುಗಳು ಗಂಗೋಪಾಧ್ಯಾಯ ಸೇರಿದಂತೆ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯ ಯಾರೊಬ್ಬರಿಂದ ಬಂದಿದ್ದರೂ ಅದು ಖಂಡನೀಯವೇ ಆಗಿದೆ' ಎಂದು ಚುನಾವಣಾ ಆಯೋಗ ತನ್ನ ಸೂಚನೆಯಲ್ಲಿ ತಿಳಿಸಿದೆ.

ಅಲ್ಲದೇ ಆದೇಶದ ಪ್ರತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಕಳುಹಿಸಿದ್ದು, ಪ್ರಚಾರದ ಅವಧಿಯಲ್ಲಿ ಇಂತಹ ಲೋಪ ಮರುಕಳಿಸದಂತೆ ನೋಡಿಕೊಳ್ಳಬೇಕು. ಜೊತೆಗೆ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಚಾರಕರಿಗೆ ಸಲಹೆ ನೀಡುವಂತೆ ಸೂಚಿಸಿದೆ.

ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆಗಿರುವ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಾಮ್ಲುಕ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 

ಗಂಗೋಪಾಧ್ಯಾಯ ಅವರು ಮೇ 15 ರಂದು ಹಲ್ದಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಮತಾ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂದು ಟಿಎಂಸಿಯು ಆಯೋಗಕ್ಕೆ ದೂರು ನೀಡಿತ್ತು. ಈ ದೂರಿಗೆ ಸಂಬಂಧಿಸಿದಂತೆ ಆಯೋಗವು ಅವರಿಗೆ ಶೋಕಾಸ್‌ ನೋಟಿಸ್‌ ಕಳುಹಿಸಿತ್ತು.

‘ಗಂಗೋಪಾಧ್ಯಾಯ ಅವರು ನೋಟಿಸ್‌ಗೆ ನೀಡಿದ ಉತ್ತರವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ. ಆವರು ಮಮತಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದ್ದೇವೆ. ಮುಖ್ಯಮಂತ್ರಿ ವಿರುದ್ಧ ‘ಕೀಳುಮಟ್ಟದ ವೈಯಕ್ತಿಕ ದಾಳಿ’ ನಡೆಸಿ, ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದೆ’ ಎಂದು ಆಯೋಗ ತಿಳಿಸಿದೆ. ನಿರ್ಬಂಧವು ಮಂಗಳವಾರ ಸಂಜೆ 5 ರಿಂದ ಜಾರಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT