ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್‌ ಅರ್ಜಿ ತಿರಸ್ಕಾರ

ಹರಿಯಾಣ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಜೈರಾಂ ರಮೇಶ್‌ ದೂರು
Published 21 ಆಗಸ್ಟ್ 2024, 15:49 IST
Last Updated 21 ಆಗಸ್ಟ್ 2024, 15:49 IST
ಅಕ್ಷರ ಗಾತ್ರ

ನವದೆಹಲಿ: ಹರಿಯಾಣದಲ್ಲಿ 5700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿರುವ ಚುನಾವಣಾ ಆಯೋಗ, ಎಂಸಿಸಿ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದೆ.

ಆದರೆ, ಈ ನೇಮಕಾತಿಗಳ ಫಲಿತಾಂಶವನ್ನು ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾದ ಬಳಿಕ ಪ್ರಕಟಿಸುವಂತೆ ಆಯೋಗ ಸರ್ಕಾರಕ್ಕೆ ತಿಳಿಸಿದೆ.

ಈ ಸಂಬಂಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಆಗಸ್ಟ್ 18 ಮತ್ತು 19ರಂದು ಎರಡು ಪ್ರತ್ಯೇಕ ದೂರುಗಳನ್ನು ಆಯೋಗಕ್ಕೆ ಸಲ್ಲಿಸಿದ್ದರು. ಎಂಸಿಸಿ ಜಾರಿಯಾಗುವುದಕ್ಕೂ ಮುನ್ನವೇ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯಿಸಿದ ಬಳಿಕ, ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ.

‘5,600 ಪೊಲೀಸ್‌ ಕಾನ್‌ಸ್ಟೆಬಲ್‌, 76 ಪದವೀಧರ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ 38 ಹಿರಿಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಸರ್ಕಾರವು ನೀತಿ ಸಂಹಿತೆ ಉಲ್ಲಂಘಿಸಿದೆ’ ಎಂದು ಜೈರಾಮ್‌ ರಮೇಶ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಹರಿಯಾಣ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಮತ್ತು ಹರಿಯಾಣ ಲೋಕಸೇವಾ ಆಯೋಗವು ಕಾನ್‌ಸ್ಟೆಬಲ್‌ ಮತ್ತು ಇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಜುಲೈನಿಂದಲೇ ಆರಂಭಿಸಿವೆ. ಆಗಸ್ಟ್‌ 16ರಂದು ಮಾದರಿ ನೀತಿ ಸಂಹಿತೆ ಜಾರಿಗೂ ಕೆಲ ಗಂಟೆಗಳ ಮುನ್ನ ನೇಮಕಾತಿಗೆ ಸಂಬಂಧಿಸಿದ ಜಾಹೀರಾತು ಪ್ರಕಟವಾಗಿದೆ ಎಂದು ಹರಿಯಾಣ ಸರ್ಕಾರ ಪ್ರತಿಕ್ರಿಯಿಸಿತ್ತು. ಇದನ್ನು ಉಲ್ಲೇಖಿಸಿ ಆಯೋಗ ಕಾಂಗ್ರೆಸ್‌ ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT