ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್ ಕುಖ್ಯಾತ ಉಗ್ರನೇ?: ಇ.ಡಿ ವರ್ತನೆಗೆ ಪತ್ನಿ ಸುನೀತಾ ಕಿಡಿ

Published 21 ಜೂನ್ 2024, 12:40 IST
Last Updated 21 ಜೂನ್ 2024, 12:40 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇಜ್ರಿವಾಲ್‌ ಪತ್ನಿ ಸುನೀತಾ, ‘ಕೇಜ್ರಿವಾಲ್ ಅವರು ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಕುಖ್ಯಾತ ಭಯೋತ್ಪಾದಕರೇನೋ ಎಂಬಂತೆ ಇ.ಡಿ ವರ್ತಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಹರಿಯಾಣದಿಂದ ಹೆಚ್ಚು ನೀರು ಪೂರೈಸಬೇಕು ಎಂದು ಆಗ್ರಹಿಸಿ ದೆಹಲಿ ಸಚಿವೆ ಆತಿಶಿ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿರುವ ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ಮಾತನಾಡಿದ ಸುನೀತಾ, ‘ಮುಖ್ಯಮಂತ್ರಿಯವರಿಗೆ ಗುರುವಾರ ಜಾಮೀನು ಸಿಕ್ಕಿತು. ಬೆಳಿಗ್ಗೆ ಆದೇಶ ಅಪ್‌ಲೋಡ್‌ ಆಗಬೇಕಿತ್ತು. ಆದರೆ, ಕೇಜ್ರಿವಾಲ್‌ ಭಾರತಕ್ಕೆ ಬೇಕಾದ ಕುಖ್ಯಾತ ಉಗ್ರರೇನೋ ಎಂಬಂತೆ ಇದು (ಮೇಲ್ಮನವಿ) ನಡೆದಿದೆ’ ಎಂದು ದೂರಿದರು. 

‘ದೇಶದಲ್ಲಿ ಸರ್ವಾಧಿಕಾರವು ಎಲ್ಲ ಮಿತಿಗಳನ್ನೂ ಮೀರಿದೆ. ಯಾರೊಬ್ಬರಿಗೂ ಸೆರೆಮನೆವಾಸದಿಂದ ಮುಕ್ತಿ ನೀಡಲು ಇ.ಡಿ ಬಯಸುತ್ತಿಲ್ಲ. ಜಾಮೀನು ನೀಡಿರುವುದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ಹೈಕೋರ್ಟ್‌ ನಮಗೆ ನ್ಯಾಯ ನೀಡಲಿದೆ ಎಂಬ ವಿಶ್ವಾಸವಿದೆ’ ಎಂದರು. 

ನ್ಯಾಯಾಂಗ ವ್ಯವಸ್ಥೆಯ ಅಣಕು:

ಹೈಕೋರ್ಟ್‌ಗೆ ಇ.ಡಿ ಮೇಲ್ಮನವಿ ಸಲ್ಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಎಪಿ ಸಂಸದ ಸಂಜಯ್‌ ಸಿಂಗ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅಣಕವಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. 

‘ಮೋದಿ ಸರ್ಕಾರದ ಗೂಂಡಾಗಿರಿ ನೋಡಿ. ಅಧೀನ ನ್ಯಾಯಾಲಯದ ಆದೇಶ ಇನ್ನೂ ಬಂದಿಲ್ಲ. ಅದರ ಪ್ರತಿಯೂ ಸಿಕ್ಕಿಲ್ಲ. ಅಷ್ಟರಲ್ಲೇ ಇ.ಡಿಯು ಹೈಕೋರ್ಟ್‌ಗೆ ಹೋಗಿದೆ. ಯಾವ ಆದೇಶದ ವಿರುದ್ಧ ಅದು ಮೇಲ್ಮನವಿ ಸಲ್ಲಿಸಿದೆ? ಈ ದೇಶದಲ್ಲಿ ಏನು ನಡೆಯುತ್ತಿದೆ? ಮೋದಿಯವರೇ ಈ ದೇಶದ ನ್ಯಾಯ ವ್ಯವಸ್ಥೆಯನ್ನು ಯಾಕೆ ಅಪಹಾಸ್ಯ ಮಾಡುತ್ತಿದ್ದೀರಿ? ಇಡೀ ದೇಶ ನಿಮ್ಮನ್ನು ನೋಡುತ್ತಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT