ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪ್ರಕರಣ: ಮೊಯಿತ್ರಾಗೆ ಮತ್ತೆ ED ಸಮನ್ಸ್‌

Published 4 ಮಾರ್ಚ್ 2024, 14:49 IST
Last Updated 4 ಮಾರ್ಚ್ 2024, 14:49 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಲೋಕಸಭೆಯ ಮಾಜಿ ಸಂಸದೆ ಹಾಗೂ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ಸೋಮವಾರ ಸಮನ್ಸ್ ಜಾರಿ ಮಾಡಿದೆ.

ಮಾರ್ಚ್‌ 11ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ. 49 ವರ್ಷದ ಮೊಯಿತ್ರಾ ಅವರು ವಿಚಾರಣೆಗೆ ಹಾಜರಾಗಲು ಕೆಲ ವಾರಗಳ ಕಾಲಾವಕಾಶ ಕೋರಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಗಡುವು ಫೆಬ್ರುವರಿಯಲ್ಲೇ ಮುಗಿದಿದ್ದು, ಇದೀಗ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ.

ವಿದೇಶದಿಂದ ಹಣ ಜಮೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಅನಿವಾಸಿ ಬಾಹ್ಯ ಖಾತೆ (ಎನ್‌ಆರ್‌ಇ) ಮೇಲೆ ನಿಗಾ ವಹಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೆಲ ಹೇಳಿಕೆಗಳನ್ನು ದಾಖಲಿಸುವ ಸಲುವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವಿಷಯವಾಗಿ ಸಿಬಿಐ ಕೂಡಾ ಮೊಯಿತ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಲೋಕಪಾಲದ ಶಿಫಾರಸಿನಂತೆ ಕೆಲ ತಿಂಗಳ ಹಿಂದೆ ವಜಾಗೊಂಡಿದ್ದ ಮೊಯಿತ್ರಾ ಅವರನ್ನು ಇದೀಗ ಜಾರಿ ನಿರ್ದೇಶನಾಲಯವೂ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.

ಅದಾನಿ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೊಯಿತ್ರಾ ಅವರು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಉದ್ಯಮಿ ದರ್ಶನ್ ಹಿರಾನಂದಾನಿ ಅವರು ಉಡುಗೊರೆ ರೂಪದಲ್ಲಿ ಲಂಚ ನೀಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೇ ಆರೋಪಿಸಿದ್ದರು. ವೈಯಕ್ತಿಕ ಹಿತಾಸಕ್ತಿಗಾಗಿ ರಾಷ್ಟ್ರೀಯ ಭದ್ರತೆಯನ್ನೇ ಪಣಕ್ಕಿಟ್ಟಿದ್ದಾರೆ ಎಂದೂ ಮೊಯಿತ್ರಾ ವಿರುದ್ಧ ದೂರಿದ್ದರು.

‘ಅದಾನಿ ಸಮೂಹದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತನ್ನನ್ನು ಗುರಿ ಮಾಡಲಾಗಿದೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಮೊಯಿತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT