ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rahul Gandhi: ಸದನಕ್ಕೆ ಹೊರಡಲು ‘ಕೈ’ ನಾಯಕ ರಾಹುಲ್‌ ಸನ್ನದ್ಧ

ದೇಶದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ l ಲೋಕಸಭಾ ಸದಸ್ಯತ್ವ ವಿಚಾರ: ವಿಳಂಬ ಧೋರಣೆ ಸರಿಯಲ್ಲ–ಕಾಂಗ್ರೆಸ್‌
Published 5 ಆಗಸ್ಟ್ 2023, 0:28 IST
Last Updated 5 ಆಗಸ್ಟ್ 2023, 0:28 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಿದರೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅಲ್ಲದೆ ಸಂಸದೀಯ ಪ್ರಜಾಪ್ರಭುತ್ವದ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ ಎಂದು ಕಾಂಗ್ರೆಸ್‌ ಶುಕ್ರವಾರ ದೂರಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಮತ್ತು ರಾಹುಲ್‌ ಪರ ವಕೀಲ ಅಭಿಷೇಕ್‌ ಸಿಂಘ್ವಿ, ‘ಶೀಘ್ರದಲ್ಲಿಯೇ ರಾಹುಲ್‌ ಅವರ ಧ್ವನಿ ಸಂಸತ್ತಿನಲ್ಲಿ ಕೇಳಿ ಬರಲಿದೆ. ಅವರು ದೇಶದ ಜನರ ಒಳಿತಿಗಾಗಿ ಅಲ್ಲಿ ಮಾತನಾಡುತ್ತಾರೆ’ ಎಂದರು.

‘ರಾಹುಲ್ ಗಾಂಧಿ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅನುಕರಣೀಯ ಧೈರ್ಯ, ಸಂಯಮ ಮತ್ತು ನಂಬಿಕೆ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ಪೂರ್ಣವಾಗಿ ಪ್ರತಿಪಕ್ಷದ ಪ್ರಾಮುಖ್ಯತೆ ಪ್ರದರ್ಶನಗೊಂಡಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂಬ ಬದ್ಧತೆಯನ್ನು ತೋರಿದೆ’ ಎಂದು ಅವರು ಹೇಳಿದರು.

‘ರೈತರ ಸಮಸ್ಯೆಗಳು ಮತ್ತು ನಿರುದ್ಯೋಗದಂತಹ ಪ್ರಮುಖ ವಿಷಯಗಳಲ್ಲಿ ರಾಹುಲ್‌ ಅವರ ಧ್ವನಿ ಮಣಿಯುವುದಿಲ್ಲ ಎಂಬುದನ್ನೂ ಇದು ತೋರಿಸಿದೆ’ ಎಂದು ಅವರು ತಿಳಿಸಿದರು.

ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್‌ಗೆ ಅವರಿಗೆ ಲೋಕಸಭಾ ಸದಸ್ಯತ್ವ ಮರು ಸ್ಥಾಪನೆ ವಿಳಂಬವಾದಂತೆ ರಾಹುಲ್‌ ಅವರಿಗೂ ವಿಳಂಬವಾದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದಕ್ಕೆ ನೀವು ಹಲವು ನೆಪಗಳನ್ನು ಹೇಳಬಹುದು... ನಾನೂ 10ಕ್ಕು ಹೆಚ್ಚು ನೆಪಗಳನ್ನು ಹೇಳಬಲ್ಲೆ... ಇದು ದುರುದ್ದೇಶವನ್ನು ಪ್ರದರ್ಶಿಸುತ್ತದೆ’ ಎಂದರು.

ಫೈಜಲ್‌ ಅವರ ಅನರ್ಹತೆಯು 10 ವಾರಗಳ ಬಳಿಕ ಹಿಂತೆಗೆದುಕೊಳ್ಳಲಾಗಿತ್ತು. ಅವರು ಮಾರ್ಚ್‌ನಲ್ಲಿ ಲೋಕಸಭೆಗೆ ಮರಳಿದ್ದರು.

ಸ್ಪೀಕರ್‌  ಕುರಿತು ಕಾನೂನು ಸಚಿವಾಲಯ ಅಭಿಪ್ರಾಯ ಕೇಳಬೇಕೇ ಎಂಬ ಪ್ರಶ್ನೆಗೆ ಸಿಂಘ್ವಿ, ‘ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ತೀರ್ಪಿನ ಪ್ರತಿ ಲೋಕಸಭಾ ಸಚಿವಾಲಯಕ್ಕೆ ಸಲ್ಲಿಸಬೇಕು’

ನವದೆಹಲಿ: ಶಿಕ್ಷೆಗೆ ತಡೆಯಾಜ್ಞೆ ದೊರೆತಿರುವ ಕುರಿತ ಸುಪ್ರೀಂ ಕೋರ್ಟ್‌ ಆದೇಶದ ಪ್ರತಿಯನ್ನು ರಾಹುಲ್‌ ಗಾಂಧಿ ಅವರ ಪ್ರತಿನಿಧಿಯು ಲೋಕಸಭಾ ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಲೋಕಸಭೆಯ ಮಾಜಿ ಪ್ರಧಾನಿ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ತಿಳಿಸಿದರು.

ಸಚಿವಾಲಯವು ಆದೇಶವನ್ನು ಪಡೆದ ನಂತರ, ರಾಹುಲ್‌ ಅವರ ಅನರ್ಹತೆಯನ್ನು ರದ್ದುಗೊಳಿಸುವ ಕುರಿತ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ ಎಂದು ಪ್ರತಿಕ್ರಿಯಿಸಿದರು.

‘ತೆಳುಮಂಜಿನ ಪದರದಂತೆ!’

ನವದೆಹಲಿ (ಪಿಟಿಐ): ‘ಸದ್ಯಕ್ಕೆ ಕೊಂಚ ನಿರಾಳ ಎನಿಸಿರಬಹುದು. ಆದರೆ ಕಾಂಗ್ರೆಸ್‌ ನಾಯಕನ ಸ್ಥಿತಿ ತೆಳುವಾದ ಮಂಜಿನ ಪರದೆಯಂತೆ. ಇವರ ವಿರುದ್ಧ ಇನ್ನೂ ಹಲವು ಮಾನಹಾನಿ ಪ್ರಕರಣಗಳಿವೆ’ ಎಂದು ರಾಹುಲ್‌ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದ ಬೆಳವಣಿಗೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಕ್ರಿಯಿಸಿದೆ.

‘ರಾಹುಲ್‌ ಗಾಂಧಿ ಎಷ್ಟು ದಿನ ಬಚಾವಾಗಬಹುದು? ವೀರ ಸಾ‌ವರ್ಕರ್‌ ಕುಟುಂಬ ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯೂ ಬಾಕಿಯಿದೆ. ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ತಾಯಿ ಸೋನಿಯಾಗಾಂಧಿ ಜೊತೆ ಜಾಮೀನಿನ ಮೇಲೆ ಹೊರಗಿದ್ದಾರೆ. ಯಾವುದಾದರೊಂದು ಪ್ರಕರಣದಲ್ಲಿ ಶಿಕ್ಷೆಯಾದರೆ ಮತ್ತೆ ಅನರ್ಹರಾಗಲಿದ್ದಾರೆ’ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

‘ಸದನಕ್ಕೆ ಹಾಜರಾಗಲು ಅವಕಾಶ ನೀಡಿ’

ನವದೆಹಲಿ (ಪಿಟಿಐ): ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ, ರಾಹುಲ್‌ ಅವರಿಗೆ ಸದನಕ್ಕೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಶುಕ್ರವಾರ ಲೋಕಸಭಾ ಸ್ಪೀಕರ್‌ ಅನ್ನು ಒತ್ತಾಯಿಸಿದರು. ಸದಸ್ಯರು ಖಾಸಗಿ ಮಸೂದೆ ಮಂಡಿಸುವ ವೇಳೆ ಚೌಧರಿ, ಸ್ಪೀಕರ್‌ ಪೀಠದಲ್ಲಿದ್ದ ರಾಜೇಂದ್ರ ಅಗ್ರವಾಲ್‌ ಅವರನ್ನು ಆಗ್ರಹಿಸಿದರು. ಈ ಕುರಿತ ಬೆಳವಣಿಗೆಯನ್ನು ಸ್ಪೀಕರ್ ಸ್ವಾಭಾವಿಕವಾಗಿಯೇ ಗಮನಿಸುತ್ತಾರೆ ಎಂದು ಅಗ್ರವಾಲ್‌ ಪ್ರತಿಕ್ರಿಯಿಸಿದರು.

ಸದಸ್ಯತ್ವ ಮರು ಸ್ಥಾಪನೆಗೆ ಎಷ್ಟು ಸಮಯ ಬೇಕೋ?: ಖರ್ಗೆ

‘ರಾಹುಲ್‌ ಅವರ ವಿರುದ್ಧ ಶಿಕ್ಷೆಗೆ ಆದೇಶವಾದ 24 ಗಂಟೆಗಳಲ್ಲಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಈಗ ಆ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಅವರ ಲೋಕಸಭಾ ಸದಸ್ಯತ್ವ ಮರು ಸ್ಥಾಪನೆಗೆ ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆಯೋ ನೋಡೋಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

‘ಇದು ಸಂತಸದ ದಿನ. ಇದು ಕೇವಲ ರಾಹುಲ್‌ ಗಾಂಧಿ ಅವರ ಗೆಲುವಲ್ಲ, ಇಡೀ ದೇಶದ ಜನರ ಮತ್ತು ಪ್ರಜಾಪ್ರಭುತ್ವದ ಗೆಲುವು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಂವಿಧಾನ ಜೀವಂತವಾಗಿದೆ ಮತ್ತು ಈ ಮೂಲಕ ನ್ಯಾಯ ಪಡೆಯಬಹುದು ಎಂಬುದಕ್ಕೆ ಇದು ನಿದರ್ಶನ. ಇದು ಸಾಮಾನ್ಯ ಜನರ ಮತ್ತು ಸಾಂವಿಧಾನಿಕ ತತ್ವಗಳ ವಿಜಯ’ ಎಂದು ಖರ್ಗೆ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT