ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ ದೇಣಿಗೆಗೆ ನ್ಯಾಯಪೀಠದ ಅಸಮ್ಮತಿ

‘ಚುನಾಯಿತರಾದವರು ಜನರ ಕರೆಗೆ ಕಿವಿಗೊಡದೆ ಇದ್ದರೆ ಪ್ರಜಾತಂತ್ರ ಉಳಿಯುತ್ತದೆಯೇ?’-ಸುಪ್ರೀಂ ಕೋರ್ಟ್‌.
Published 15 ಫೆಬ್ರುವರಿ 2024, 16:05 IST
Last Updated 15 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ನವದೆಹಲಿ: ಪ್ರಜಾತಂತ್ರ ವ್ಯವಸ್ಥೆಯು ಚುನಾವಣೆಯಲ್ಲಿ ಆರಂಭವಾಗಿ, ಚುನಾವಣೆಯಲ್ಲೇ ಮುಕ್ತಾಯಗೊಳ್ಳುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿಯಿಲ್ಲದೆ ದೇಣಿಗೆ ನೀಡಲು ಕಾರ್ಪೊರೇಟ್ ಸಂಸ್ಥೆಗಳಿಗೆ ಅವಕಾಶ ನೀಡುವುದರಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಸುವ ಕೆಲಸ ಮಾಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು, ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಸಾರಿದ ತೀರ್ಪಿನಲ್ಲಿ ಈ ಮಾತುಗಳನ್ನು ಕೂಡ ಹೇಳಿದೆ.

‘ಚುನಾಯಿತರಾದವರು ತಮ್ಮನ್ನು ಚುನಾಯಿಸಿದವರಿಗೆ ಉತ್ತರ ಹೇಳಬೇಕಿರುವ ಕಾರಣಕ್ಕೆ ಪ್ರಜಾತಂತ್ರವು ನಿರಂತರವಾಗಿ ಇರುತ್ತದೆ... ಆದರೆ, ಚುನಾಯಿತರಾದವರು ಸಹಾಯ ಬೇಕಿರುವವರ ಕರೆಗೆ ಕಿವಿಗೊಡದೆ ಇದ್ದರೆ ಪ್ರಜಾತಂತ್ರ ವ್ಯವಸ್ಥೆ ಉಳಿದುಕೊಳ್ಳುತ್ತದೆಯೇ’ ಎಂದು ಸಿಜೆಐ ಚಂದ್ರಚೂಡ್ ಅವರು ತೀರ್ಪಿನಲ್ಲಿ ಪ್ರಶ್ನಿಸಿದ್ದಾರೆ.

‘ಭಾರಿ ಪ್ರಮಾಣದ ಹಣಕಾಸಿನ ಮೂಲ ಹೊಂದಿರುವ ಹಾಗೂ ರಾಜಕೀಯ ಪಕ್ಷಗಳ ಜೊತೆ ಕೊಡು–ಕೊಳ್ಳುವ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಕಂಪನಿಗಳಿಗೆ ಯಾವ ಮಿತಿಗಳೂ ಇಲ್ಲದೆ ದೇಣಿಗೆ ನೀಡಲು ಅವಕಾಶ ಕಲ್ಪಿಸಿದರೆ ಚುನಾಯಿತರಾದವರು, ಮತದಾರರಿಗೆ ನಿಜವಾಗಿಯೂ ಸ್ಪಂದನಶೀಲರಾಗಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳುತ್ತಿದ್ದೇವೆ’ ಎಂದು ಅವರು ಬರೆದಿದ್ದಾರೆ.

ಕಾರ್ಪೊರೇಟ್ ದೇಣಿಗೆಯನ್ನು ಅದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯುವ ಉದ್ದೇಶದಿಂಲೂ ನೀಡಲಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ–ಪ್ರತಿವಾದದ ಸಂದರ್ಭದಲ್ಲಿ ಒಪ್ಪಿದ್ದರು.

‘ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳು ಯಾವ ಮಿತಿಗಳೂ ಇಲ್ಲದೆ ದೇಣಿಗೆ ನೀಡಲು ಅವಕಾಶ ಕಲ್ಪಿಸುವ ರೀತಿಯಲ್ಲಿ ಕಂಪನಿಗಳ ಕಾಯ್ದೆಯಲ್ಲಿ ಬದಲಾವಣೆ ತಂದಿದ್ದು ಸಮಾನತೆಯ ಹಕ್ಕಿಗೆ ವಿರುದ್ಧವಾದುದು’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಕಂಪನಿಗಳು ಯಾವ ಮಿತಿಯೂ ಇಲ್ಲದಂತೆ ದೇಣಿಗೆ ನೀಡುವ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಪೂರಕವಾಗಿಲ್ಲ. ಇಂತಹ ವ್ಯವಸ್ಥೆಗೆ ಅವಕಾಶ ನೀಡಿದರೆ ಕೆಲವು ವ್ಯಕ್ತಿಗಳಿಗೆ ಅಥವಾ ಕಂಪನಿಗಳಿಗೆ ತಮ್ಮ ಸಂಪನ್ಮೂಲ ಬಳಸಿಕೊಂಡು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಲು ಅವಕಾಶ ಸಿಕ್ಕಂತಾಗುತ್ತದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ರಾಜಕೀಯ ದೇಣಿಗೆ ಮೂಲಕ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ಕಾರ್ಪೊರೇಟ್ ಕಂಪನಿಗಳಿಗೆ ವ್ಯಕ್ತಿಗಳಿಗೆ ಇರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ವ್ಯಕ್ತಿಗಳು ನೀಡುವ ದೇಣಿಗೆಯ ಹಿಂದೆ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವ ಇರಾದೆಯೂ ಒಂದಿಷ್ಟು ಇರುತ್ತದೆ. ಆದರೆ, ಕಂಪನಿಗಳು ನೀಡುವ ದೇಣಿಗೆಗಳು ಶುದ್ಧ ವಾಣಿಜ್ಯ ಉದ್ದೇಶದವು, ದೇಣಿಗೆಗೆ ಪ್ರತಿಯಾಗಿ ಪ್ರಯೋಜನಗಳನ್ನು ಪಡೆಯುವ ಉದ್ದೇಶ ಹೊಂದಿರುತ್ತವೆ ಎಂದು ಕೋರ್ಟ್‌ ಹೇಳಿದೆ.

‘ಈ ಕಾರಣಗಳಿಗಾಗಿ, ರಾಜಕೀಯ ದೇಣಿಗೆಯ ವಿಚಾರದಲ್ಲಿ ವ್ಯಕ್ತಿ ಹಾಗೂ ಕಂಪನಿಗಳನ್ನು ಒಂದೇ ಬಗೆಯಲ್ಲಿ ಕಾಣುವುದು ಸರಿಯಲ್ಲ’ ಎಂದು ಪೀಠವು ಹೇಳಿದೆ.

‘ಇದರ ಅರ್ಥವು ಶಾಸಕಾಂಗವು ವ್ಯಕ್ತಿಗಳಿಂದ ಬರುವ ದೇಣಿಗೆಗೆ ಮಿತಿ ವಿಧಿಸಬಾರದು ಎಂಬುದಲ್ಲ. ಆದರೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಗಮನಿಸಿ, ವ್ಯಕ್ತಿ ಹಾಗೂ ಕಂಪನಿಗಳನ್ನು ಕಾನೂನು ಒಂದೇ ಬಗೆಯಲ್ಲಿ ಕಾಣಬಾರದು’ ಎಂದು ಪೀಠವು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT