ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರ | ಅನಾನಸ್‌ ಜತೆ ಪಟಾಕಿ ಸ್ಫೋಟದಿಂದ ಆನೆ ಸಾವು

Last Updated 3 ಜೂನ್ 2020, 2:11 IST
ಅಕ್ಷರ ಗಾತ್ರ

ತಿರುವನಂತಪುರ: ಗರ್ಭ ಧರಿಸಿದ್ದ ಆನೆಯೊಂದು ಕೆಲ ದುಷ್ಕರ್ಮಿಗಳ ಕೃತ್ಯದಿಂದಾಗಿ ದಾರುಣವಾಗಿ ನೀರಲ್ಲೇ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪಟಾಕಿಗಳಿದ್ದ ಅನಾನಸ್‌ ಹಣ್ಣು ಸೇವಿಸಿದಾಗ ಬಾಯಿಯಲ್ಲಿ ಸ್ಫೋಟಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಸ್ಥಳೀಯರೇ ಈ ಅನಾನಸ್‌ ನೀಡಿದ್ದರು ಎಂದು ಹೇಳಲಾಗಿದೆ.

ಕಳೆದ ಬುಧವಾರ ನಡೆದಿರುವ ಈ ಘಟನೆಯ ವಿವರಗಳನ್ನು ಮಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನ್‌ ಕೃಷ್ಣನ್‌ ಅವರು ಫೇಸ್‌ಬುಕ್‌ ಮೂಲಕ ಬಹಿರಂಗಪಡಿಸಿದ ಬಳಿಕವೇ ಗೊತ್ತಾಗಿದೆ. ಅರಣ್ಯ ತೊರೆದಿದ್ದ ಈ ಆನೆ ಆಹಾರಕ್ಕಾಗಿ ಸಮೀಪದ ಗ್ರಾಮಕ್ಕೆ ತೆರಳಿತ್ತು. ಬೀದಿಯಲ್ಲಿ ತೆರಳುತ್ತಿದ್ದಾಗ ಅನಾನಸ್‌ ಹಣ್ಣಿನಲ್ಲಿ ಪಟಾಕಿಗಳನ್ನಿಟ್ಟು ನೀಡಲಾಗಿದೆ.

‘ಅನಾನಸ್‌ ಸೇವಿಸಿದಾಗ ಏಕಾಏಕಿ ಪಟಾಕಿಗಳು ಸ್ಫೋಟಗೊಂಡಿವೆ. ಇದರಿಂದ, ಆನೆ ಆಘಾತಕ್ಕೆ ಒಳಗಾಗಿದೆ. ಸ್ಫೋಟದ ತೀವ್ರತೆಗೆ ಬಾಯಿ ಮತ್ತು ನಾಲಿಗೆಗೆ ತೀವ್ರ ಗಾಯವಾಗಿದೆ. ಆನೆಯು ನೋವು ಮತ್ತು ಹಸಿವಿನಿಂದಲೇ ಗ್ರಾಮದಲ್ಲಿ ಓಡಾಡುತ್ತ ಸುತ್ತಾಡಿದೆ. ಗಾಯದಿಂದಾಗಿ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲಿದರೂ ಗ್ರಾಮದ ಯಾರೊಬ್ಬರಿಗೂ ತೊಂದರೆ ನೀಡಿಲ್ಲ. ಈ ಆನೆಯೂ ದೇವಿ ಸ್ವರೂಪಿ’ ಎಂದು ಕೃಷ್ಣನ್‌ ಬರೆದಿದ್ದಾರೆ.

‘ನೋವು ಸಹಿಸಿಕೊಳ್ಳದ ಆನೆಯು ವೆಲ್ಲಿಯಾರ್‌ ನದಿಗೆ ತೆರಳಿ ಅಲ್ಲಿಯೇ ಬಹುಹೊತ್ತಿನವರೆಗೆ ನಿಂತುಕೊಂಡಿತ್ತು. ಆನೆಯನ್ನು ನೀರಿನಿಂದ ಹೊರಗೆ ತರಲು ಮತ್ತೆ ಎರಡು ಆನೆಗಳನ್ನು ತರಲಾಯಿತು. ಆದರೆ, ಅದು ಬರಲಿಲ್ಲ. ಆನೆಯನ್ನು ರಕ್ಷಿಸುವ ನಮ್ಮ ಎಲ್ಲ ಪ್ರಯತ್ನಗಳು ವಿಫಲವಾದವು. ಕೊನೆಗೆ ಮೇ 27ರಂದು ಮಧ್ಯಾಹ್ನ 4 ಗಂಟೆ ನೀರಲ್ಲೇ ನಿಂತು ಸಾವಿಗೀಡಾಯಿತು’ ಎಂದು ವಿವರಿಸಿದ್ದಾರೆ. ನೀರಲ್ಲೇ ಬಹುಹೊತ್ತು ನಿಂತಿದ್ದ ಆನೆ ಉಸಿರಾಟದ ತೊಂದರೆಯಿಂದ ಸಾವಿಗೀಡಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT