ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲೇಜು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ: ಆಡಳಿತ ಮಂಡಳಿ ವಿರುದ್ಧ ದೂರು

Published : 30 ಆಗಸ್ಟ್ 2024, 13:59 IST
Last Updated : 30 ಆಗಸ್ಟ್ 2024, 13:59 IST
ಫಾಲೋ ಮಾಡಿ
Comments

ಗುಡ್ಲವಲ್ಲೇರು: ‘ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿರುವ ಎಸ್.ಆರ್. ಗುಡ್ಲವಲ್ಲೇರು ಎಂಜಿನಿಯರಿಂಗ್ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಿಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಆಡಳಿತ ಮಂಡಳಿಯು ದೂರು ನೀಡಿದ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದೆ. ಆ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ’ ಎಂದು ಸಚಿವ ಕೆ. ರವೀಂದ್ರ ಅವರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಕಾಲೇಜಿನಲ್ಲಿ ನಡೆದ ಈ ಘಟನೆ ನಂತರ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದರು.

‘ಕಾಲೇಜು ಆಡಳಿತ ಮಂಡಳಿ ಬಗ್ಗೆ ನಮಗೆ ವಿಶ್ವಾಸವಿಲ್ಲ. ಪ್ರಕರಣ ಮುಚ್ಚಿಹಾಕಲು ಆಡಳಿತ ಮಂಡಳಿಯು ಕಳೆದ ಮೂರು ದಿನಗಳಿಂದ ಯತ್ನಿಸುತ್ತಿದೆ. ದೂರು ನೀಡಲು ಮುಂದಾದವರಿಗೆ ಬೆದರಿಕೆ ಹಾಕಲಾಗುತ್ತಿದೆ. ಕೃತ್ಯ ಎಸಗಿದವರ ಬಂಧನ ಆಗದ ಹೊರತೂ ತರಗತಿಗೆ ಹೋಗುವುದಿಲ್ಲ ಎಂದು ನಿರ್ಧರಿಸಲಾಗಿದೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಘಟನೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಸಚಿವ ರವೀಂದ್ರ ಅವರು ಮಾಹಿತಿ ಪಡೆದರು. ಘಟನೆ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ವರದಿಯಾಗಿದೆ. 

ಈ ಘಟನೆ ಕುರಿತಂತೆ ವಿದ್ಯಾರ್ಥಿಗಳ ಬಳಿ ಯಾವುದೇ ಸಾಕ್ಷ್ಯಗಳಿದ್ದಲ್ಲಿ, ಅದನ್ನು ನೇರವಾಗಿ ತನಗೆ ಕಳುಹಿಸುವಂತೆ ಮುಖ್ಯಮಂತ್ರಿ ನಾಯ್ಡು ಮನವಿ ಮಾಡಿದ್ದಾರೆ. 

ಘಟನೆಯ ತನಿಖೆ ಆರಂಭಿಸಿರುವ ಪೊಲೀಸರು, ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಯಾವುದೇ ಗುಪ್ತ ಕ್ಯಾಮೆರಾ ಲಭ್ಯವಾಗಿಲ್ಲ ಎಂದಿದ್ದಾರೆ. ಈ ಘಟನೆ ಕುರಿತು ವಿದ್ಯಾರ್ಥಿನಿಯರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದ್ದಾರೆ. 

ಸಂದೇಹದ ಆಧಾರದಲ್ಲಿ ಕೆಲವೊಂದು ಲ್ಯಾಪ್‌ಟಾಪ್‌, ಮೊಬೈಲ್ ಫೋನ್‌ಗಳು ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸಮ್ಮುಖದಲ್ಲಿ ತಪಾಸಣೆಗೆ ಒಳಪಡಿಸಿದರು. ಇನ್‌ಸ್ಪೆಕ್ಟರ್‌ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT