ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಮೀನಿಗೆ ಅತಿಯಾದ ಷರತ್ತು ಬೇಡ: ಸುಪ್ರೀಂ ಕೋರ್ಟ್

Published 22 ಆಗಸ್ಟ್ 2024, 16:29 IST
Last Updated 22 ಆಗಸ್ಟ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: ಜಾಮೀನು ಮಂಜೂರು ಮಾಡುವುದು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿಪರೀತವಾದ ಷರತ್ತುಗಳನ್ನು ವಿಧಿಸುವುದು ಬಲಗೈಯಲ್ಲಿ ಕೊಟ್ಟು, ಎಡಗೈಯಿಂದ ಹಿಂಪಡೆಯುವುದಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ಗುರುವಾರ ನೀಡಿರುವ ತೀರ್ಪೊಂದರಲ್ಲಿ ಹೇಳಿದೆ.

ಸಂವಿಧಾನದ 21ನೇ ವಿಧಿಯು ನೀಡಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಂಬಂಧಪಟ್ಟ ವ್ಯಕ್ತಿಯ ಹಾಜರಿರುವಿಕೆಯನ್ನು ಖಾತರಿಪಡಿಸುವ ಜಾಮೀನು ಆದೇಶವು ಸೂಕ್ತವಾಗುತ್ತದೆ ಎಂದು ಹೇಳಿದೆ.

ವಂಚನೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ 13 ಪ್ರಕರಣಗಳು ದಾಖಲಾಗಿರುವ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.

ತಮಗೆ ಈ 13 ಪ್ರಕರಣಗಳಲ್ಲಿಯೂ ಜಾಮೀನು ದೊರೆತಿದೆ, ಎರಡು ಪ್ರಕರಣಗಳಿಗೆ ಸಂಬಂಧಿಸಿದ ಜಾಮೀನು ಷರತ್ತುಗಳನ್ನು ಪೂರೈಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದರು. ಆದರೆ ಇನ್ನುಳಿದ 11 ಪ್ರಕರಣಗಳಿಗೆ ಪ್ರತ್ಯೇಕವಾದ ಶ್ಯೂರಿಟಿ ಒದಗಿಸುವುದಕ್ಕೆ ತಮ್ಮಿಂದ ಆಗುತ್ತಿಲ್ಲ ಎಂದು ಅರ್ಜಿದಾರ ಹೇಳಿದ್ದ ಮಾತನ್ನು ಪೀಠವು ದಾಖಲಿಸಿಕೊಂಡಿತ್ತು.

‘13 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ, ಅರ್ಜಿದಾರರಿಗೆ ಶ್ಯೂರಿಟಿ ಒದಗಿಸಲು ಆಗುತ್ತಿಲ್ಲ. ಅತಿಯಾದ ಷರತ್ತುಗಳನ್ನು ವಿಧಿಸುವುದರಿಂದ ಜಾಮೀನು ನಿರಾಕರಿಸಿದಂತಾಗುತ್ತದೆ ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ತತ್ವ. ಅತಿಯಾದ ಷರತ್ತುಗಳು ಯಾವುವು ಎಂಬುದು ಪ್ರತಿ ಪ್ರಕರಣವನ್ನು ಆಧರಿಸಿರುತ್ತದೆ’ ಎಂದು ಹೇಳಿದೆ.

ರಾಜಸ್ಥಾನದಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಿಸಿದ ಜಾಮೀನು ಆದೇಶದಲ್ಲಿ, ಸ್ಥಳೀಯ ವ್ಯಕ್ತಿಯೊಬ್ಬರನ್ನು ಶ್ಯೂರಿಟಿಯಾಗಿ ನೀಡುವಂತೆ ಸೂಚಿಸಲಾಗಿದೆ. ಆದರೆ ಆರೋಪಿಯು ಹರಿಯಾಣದವರು. ಸ್ಥಳೀಯ ವ್ಯಕ್ತಿಯನ್ನು ಶ್ಯೂರಿಟಿಯಾಗಿ ನೀಡುವುದು ಅವರಿಗೆ ಬಹಳ ಕಷ್ಟದ ಕೆಲಸ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT