ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಹಗರಣ: ಇ.ಡಿಗೆ ಉತ್ತರಿಸಲು ಕೇಜ್ರಿವಾಲ್‌ಗೆ ಇನ್ನಷ್ಟು ಕಾಲಾವಕಾಶ

Published 11 ಜುಲೈ 2024, 13:26 IST
Last Updated 11 ಜುಲೈ 2024, 13:26 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಜತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತಮಗೆ ನೀಡಿರುವ ಸಮನ್ಸ್‌ಗಳನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಸೆ.9 ರಂದು ನಡೆಸಲಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ನೇತೃತ್ವದ ಪೀಠವು ಇ.ಡಿ ಸಲ್ಲಿಸಿರುವ ಉತ್ತರಕ್ಕೆ ಪ್ರತಿಕ್ರಿಯೆ ನೀಡಲು ಎಎಪಿ ನಾಯಕನಿಗೆ ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. 

ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಉಂಟಾಗಿರುವುದರಿಂದ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಕೋರಿದರು.

‘ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ’ ಎಂದು ನ್ಯಾಯಮೂರ್ತಿಗಳಾದ ಅಮಿತ್‌ ಶರ್ಮಾ ಅವರನ್ನೊಳಗೊಂಡಿರುವ ಪೀಠವು ಗುರುವಾರ ಹೇಳಿತು.

ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದ ಕಾರಣ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್‌ 21 ರಂದು ಕೇಜ್ರಿವಾಲ್‌ ಅವರನ್ನು ಇ.ಡಿ ಬಂಧಿಸಿತ್ತು. ಆದ್ದರಿಂದ ಅವರು ಇ.ಡಿ ಸಮನ್ಸ್ ವಿರುದ್ಧ ಸಲ್ಲಿಸಿರುವ ಅರ್ಜಿ ನಿರರ್ಥಕ ಎಂದು ಇ.ಡಿ ಪರ ವಕೀಲರು ಈ ಹಿಂದೆ ಹೈಕೋರ್ಟ್‌ಗೆ ತಿಳಿಸಿದ್ದರು.

ಕೇಜ್ರಿವಾಲ್‌ ಅವರಿಗೆ ಇ.ಡಿ ಸಮನ್ಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯವು ಏಪ್ರಿಲ್ 22ರಂದು ಎರಡು ವಾರಗಳ ಅವಕಾಶ ನೀಡಿತ್ತು. ಮೇ ತಿಂಗಳಲ್ಲಿ ನಡೆದಿದ್ದ ಮುಂದಿನ ವಿಚಾರಣೆ ವೇಳೆ ಕಾಲಾವಕಾಶವನ್ನು ಮತ್ತೆ ನಾಲ್ಕು ವಾರಗಳ ಅವಧಿಗೆ ವಿಸ್ತರಿಸಿತ್ತು.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಜೂನ್ 20 ರಂದು ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿತ್ತು. ಆದರೆ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಜೂನ್‌ 25ರಂದು ತಡೆ ನೀಡಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಸಿಬಿಐ ಜೂನ್‌ 26ರಂದು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT