ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜಾಮೀನು ರದ್ದುಗೊಳಿಸುವಂತೆ ಮಾಡಿದ ಮನವಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವನ್ನು (ಇ.ಡಿ) ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಜತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ನಿಂದ ಈಗಾಗಲೇ ಮಧ್ಯಂತರ ಜಾಮೀನು ಪಡೆದಿದ್ದಾರೆ. ಅವರ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಅಂತಹ ಮಹತ್ವದ ಅಂಶ ಏನಿದೆ ಎಂದು ಕೇಳಿದೆ.
‘ನನ್ನ ಪ್ರಶ್ನೆಗೆ ನೀವು ಉತ್ತರಿಸಿ. ನಿಮ್ಮ ಮನವಿಯನ್ನು ನಾನು ಒಪ್ಪಿಕೊಂಡರೆ ಏನಾಗುತ್ತದೆ? ನೀವು ಅವರನ್ನು (ಕೇಜ್ರಿವಾಲ್) ಮತ್ತೆ ಬಂಧಿಸುತ್ತೀರಾ’ ಎಂದು ನ್ಯಾಯಮೂರ್ತಿಗಳಾದ ನೀನಾ ಬನ್ಸಲ್ ಕೃಷ್ಣ ಅವರು ಇ.ಡಿ. ಪರ ಹಾಜರಿದ್ದ ವಕೀಲರನ್ನು ಪ್ರಶ್ನಿಸಿದರು.
ಅದಕ್ಕೆ ವಕೀಲರು, ‘ಬಂಧಿಸುವ ಪ್ರಶ್ನೆಯೇ ಇಲ್ಲ ಮತ್ತು ಅವರ ಬಂಧನ ಅಕ್ರಮ ಎಂದು ಯಾರೂ ಹೇಳಿಲ್ಲ’ ಎಂದು ಪ್ರತಿಕ್ರಿಯಿಸಿದರು. ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಸೆ.5ಕ್ಕೆ ನಿಗದಿಪಡಿಸಿದೆ.