ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಟೋಲ್ ಚಳವಳಿ; ಹೋರಾಟ ಬಿರುಸು

ದೆಹಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಯತ್ನ; ಪೊಲೀಸರಿಂದ ಭಾರಿ ಬಂದೋಬಸ್ತ್
Last Updated 13 ಡಿಸೆಂಬರ್ 2020, 1:16 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದರು. ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಯತ್ನಿಸಿದ ರೈತರು, ದೆಹಲಿ– ಪಂಜಾಬ್ ಹಾಗೂ ಹರಿಯಾಣ ಹೆದ್ದಾರಿಯ ಹಲವು ಟೋಲ್ ಪ್ಲಾಜಾಗಳನ್ನು ಕೆಲಕಾಲ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.

ಆರಂಭದಲ್ಲಿ ನೂರಾರು ರೈತರು ದೆಹಲಿಯಿಂದ ಆಗ್ರಾಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ತಡೆಯಲು ಮುಂದಾದರು.

ಭಾರಿ ಸಂಖ್ಯೆಯಲ್ಲಿ ನಿಯೋಜನೆ ಗೊಂಡಿದ್ದ ಪೊಲೀಸರು ರೈತರನ್ನು ತಡೆದರು. ರೈತರ ಕೆಲವು ಗುಂಪುಗಳು ಟೋಲ್‌ ಪ್ಲಾಜಾಗಳಿಗೆ ತೆರಳಿದವು. ಟೋಲ್‌ಗಳಲ್ಲಿ ಹಣ ಪಾವತಿಸದೇ ವಾಹನಗಳು ಮುಂದೆ ಸಾಗುವಂತೆ ರೈತರು ಸೂಚಿಸಿದರು.

ಹರಿಯಾಣದಲ್ಲಿ ಭಾರತೀಯ ಕಿಸಾನ್ ಸಂಘಟನೆಯ ನಾಯಕರಾದ ಮಲ್ಕಿತ್ ಸಿಂಗ್ ಮತ್ತು ಮನೀಶ್ ಚೌಧರಿ ಅವರು ಅಂಬಾಲ–ಹಿಸ್ಸಾರ್ ಹೆದ್ದಾರಿಯ ಟೋಲ್‌ಗೆ ನೂರಾರು ರೈತರ ಜೊತೆ ಲಗ್ಗೆಯಿಟ್ಟರು. ಕರ್ನಾಲ ಹಾಗೂ ಬಸ್ತಾರ ಟೋಲ್‌ಗಳಲ್ಲೂ ಟೋಲ್ ಪಾವತಿಸದೇ ವಾಹನಗಳನ್ನು ಬಿಡಲಾಯಿತು. ಪಂಜಾಬ್‌ನಲ್ಲೂ ಟೋಲ್ ಚಳವಳಿ ನಡೆಯಿತು.

ಅಲೀಗಡ ಜಿಲ್ಲೆಯಲ್ಲೂ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಜಿ.ಟಿ. ರಸ್ತೆಯ ಗಭಾನಾ ಹಾಗೂ ಅಲಿಗಡ–ಆಗ್ರಾ ರಸ್ತೆಯ ಮದ್ರಕ್ ಟೋಲ್ ಪ್ಲಾಜಾಗಳಲ್ಲಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕೋವಿಡ್ ಭೀತಿ: ಕೋವಿಡ್ ತಪಾಸಣೆಗೆ ಒಳಪಡಲು ಪ್ರತಿಭಟನಾ ನಿರತ ರೈತರು ಒಪ್ಪುತ್ತಿಲ್ಲ ಎಂದು ಸೋನಿ ಪತ್ ಜಿಲ್ಲಾಡಳಿತ ತಿಳಿಸಿದೆ.ಒಂದೊಮ್ಮೆ ಕೋವಿಡ್ ದೃಢಪಟ್ಟರೆ ತಮ್ಮನ್ನು ಪ್ರತ್ಯೇಕವಾಗಿ ಇರಿಸುವುದರಿಂದ ಹೋರಾಟ ದುರ್ಬಲ ಗೊಳ್ಳಲಿದೆ ಎಂಬ ಭೀತಿ ರೈತರನ್ನು ಕಾಡುತ್ತಿದೆ.

ಮಹಿಳೆಯರ ಸಾರಥ್ಯ: ಪಂಜಾಬ್, ಹರಿಯಾಣಗಳಲ್ಲಿ ಕೃಷಿ ಕೆಲಸ ಮಾಡಲು ಮಹಿಳೆಯರು ಗದ್ದೆಗಳಿಗೆ ಇಳಿದಿದ್ದಾರೆ.ಗಂಡಸರು ದೆಹಲಿ ಪ್ರತಿಭಟನೆಗೆ ಹೋಗಿರುವ ಕಾರಣ ಅವರ ಅನುಪ ಸ್ಥಿತಿಯಲ್ಲಿ ಹೊಲ ಹಾಗೂ ಮನೆಯ ಜವಾಬ್ದಾರಿಯನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ. ಗೊಬ್ಬರ ಹಾಕುವುದು, ನೀರು ಹಾಯಿಸುವುದು, ಪಶುಪಾಲನೆ ಕೆಲಸಗಳನ್ನು ನಿರ್ವಹಿಸು ತ್ತಿದ್ದು, ನಿರಾತಂಕವಾಗಿ ಪ್ರತಿಭಟನೆ ಮುಂದುವರಿಸಿ ಎಂದು ಪ್ರತಿಭಟನ
ಕಾರರಿಗೆ ಅಭಯ ನೀಡಿದ್ದಾರೆ.

***

ಸರ್ಕಾರದ ಎಲ್ಲಾ ಸುಧಾರಣೆ ಗಳ ಗುರಿ ರೈತರನ್ನು ಸಮೃದ್ಧಿ ಗೊಳಿಸುವುದು. ಕೃಷಿಯಲ್ಲಿ ಹೂಡಿಕೆ ಮಾಡಲು ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಕಾಯ್ದೆಗಳು ಸಹಾಯ ಮಾಡುತ್ತವೆ

- ನರೇಂದ್ರ ಮೋದಿ, ಪ್ರಧಾನಮಂತ್ರಿ

***

ರೈತ ಚಳವಳಿಯಾಗಿ ಉಳಿಯದು

‘ಹೋರಾಟದಲ್ಲಿ ಎಡಪಂಥೀಯ ಮತ್ತು ಮಾವೊವಾದಿ ಶಕ್ತಿಗಳು ಒಳನುಸುಳಿದ್ದು, ದೇಶವಿರೋಧ ಚಟುವಟಿಕೆಗಳ ಕಾರಣ ಜೈಲು ಕಂಬಿ ಎಣಿಸುತ್ತಿರುವವರ ಬಿಡುಗಡೆಗೆ ಆಗ್ರಹಿಸುತ್ತಿವೆ. ಹೀಗಾಗಿ ಪ್ರತಿಭಟನೆಯು ರೈತರ ಹೋರಾಟವಾಗಿ ಬಹಳ ದಿನ ಉಳಿಯಲಾರದು’ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವ ನಿಷೇಧಿತ ಸಂಘಟನೆಗಳಿಗೆ ಸೇರಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಗೋಯಲ್ ಮಾಹಿತಿ ನೀಡಲಿಲ್ಲ.

‘ಬುದ್ಧಿಜೀವಿಗಳು ಮತ್ತು ಸಾಹಿತಿಗಳೆನಿಸಿದವರನ್ನು ಬಿಡುಗಡೆ ಮಾಡುವಂತೆ ರೈತರ ವೇದಿಕೆಯಲ್ಲಿ ಎದ್ದಿರುವ ಬೇಡಿಕೆಗಳು ಕೃಷಿ ಕಾನೂನು ಸುಧಾರಣೆಗಳನ್ನು ಹಳಿ ತಪ್ಪಿಸುವ ಪ್ರಯತ್ನ’ ಎಂದು ಅವರು ಹೇಳಿದ್ದಾರೆ.

‘ರೈತರ ಚಳವಳಿಯನ್ನು ಹಾಳುಮಾಡಲು ಸಮಾಜ ವಿರೋಧಿ ಶಕ್ತಿಗಳು ರೈತರ ಸೋಗಿನಲ್ಲಿ ಸಂಚು ರೂಪಿಸುತ್ತಿವೆ. ತಮ್ಮ ವೇದಿಕೆಯನ್ನು ಇಂತಹ ಶಕ್ತಿಗಳು ಬಳಸಿಕೊಳ್ಳದಂತೆ ಕೃಷಿ ಸಂಘಟನೆಗಳು ಜಾಗರೂಕರಾಗಿರಬೇಕು’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.

‘ದೇಶವಿರೋಧಿ ಹಣೆಪಟ್ಟಿ’

ಕೇಂದ್ರವನ್ನು ವಿರೋಧಿಸುವ ಎಲ್ಲರಿಗೂ ‘ಮಾವೋವಾದಿ’, ‘ರಾಷ್ಟ್ರ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪೀಯೂಷ್ ಗೋಯಲ್ ಅವರ ಟೀಕೆಗೆ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರ ರಣ ದೀಪ್ ಸುರ್ಜೆವಾಲಾ, ‘ಮೋದಿ ಯವರೇ, ಪ್ರಜಾಪ್ರಭುತ್ವದಲ್ಲಿ ನಿರಂಕುಶವಾದಕ್ಕೆ ಸ್ಥಾನವಿಲ್ಲ. ಪ್ರತಿಯೊಬ್ಬ ಎದುರಾಳಿಯನ್ನು ಮಾವೋ ವಾದಿ ಮತ್ತು ರಾಷ್ಟ್ರ ವಿರೋಧಿ ಎಂದು ಘೋಷಿಸುವುದು ನಿಮ್ಮ ಸರ್ಕಾರದ ನೀತಿಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT